ಬೆಂಗಳೂರು, ಡಿ. 23(DaijiworldNews/TA): ರಾಜ್ಯದೊಳಗಿನ ಯಾವುದೇ ವಿಚಾರಗಳನ್ನು ರಾಜ್ಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಯೇ ಇಲ್ಲ. ಅನಾವಶ್ಯಕ ಗೊಂದಲವನ್ನು ಸೃಷ್ಟಿಸುತ್ತಿರುವುದು ಮಾಧ್ಯಮಗಳೇ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ರಾಜ್ಯದ ಸ್ಥಳೀಯ ಸಮಸ್ಯೆಯನ್ನು ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು” ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಮ್ಮಲ್ಲಿ ಸಮಸ್ಯೆಯೇ ಇಲ್ಲ. ಇನ್ನು ಬಗೆಹರಿಸಿಕೊಳ್ಳುವುದೇನು ಇದೆ? ನಾನು ಹೇಳಬೇಕಾದದ್ದನ್ನು ಮುಖ್ಯಮಂತ್ರಿಗಳಿಗೂ ಹೇಳಿದ್ದೇನೆ, ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೂ ಹೇಳಿದ್ದೇನೆ. ಸಮಸ್ಯೆ ಸೃಷ್ಟಿಸುತ್ತಿರುವುದು ನೀವೇ (ಮಾಧ್ಯಮ)” ಎಂದು ಸ್ಪಷ್ಟಪಡಿಸಿದರು.
ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಅಧಿಕಾರ ಹಸ್ತಾಂತರ, ಕುರ್ಚಿ ಕಿತ್ತಾಟದ ಬಗ್ಗೆ ಉಭಯ ಬಣಗಳಿಂದ ಹೇಳಿಕೆ–ಪ್ರತಿಹೇಳಿಕೆಗಳು ಮುಂದುವರಿದಿದ್ದವು. ಈ ವಿಚಾರ ಸದನದಲ್ಲಿಯೂ ಪ್ರತಿಧ್ವನಿಸಿತ್ತು. ಹೈಕಮಾಂಡ್ ಸೂಚನೆ ಬರುವವರೆಗೂ ತಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ನಡುವೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್ನತ್ತ ಗಮನ ಹರಿಸುತ್ತಿರುವ ಸಂದರ್ಭದಲ್ಲೇ, ಮಲ್ಲಿಕಾರ್ಜುನ ಖರ್ಗೆ ಅವರು ಸ್ಥಳೀಯವಾಗಿಯೇ ವಿಚಾರ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದರು.
ಗೊಂದಲವನ್ನು ಇಲ್ಲೇ ಬಗೆಹರಿಸಬೇಕು: ಡಾ. ಜಿ. ಪರಮೇಶ್ವರ್ :
ಇನ್ನೊಂದೆಡೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ ಮೇಲೆ ಅದಕ್ಕೆ ಎಲ್ಲರೂ ಗೌರವ ನೀಡಬೇಕು. ಗೊಂದಲವನ್ನು ಇಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ ಮೇಲೆ, ಅದನ್ನು ಇಲ್ಲೇ ಬಗೆಹರಿಸಿಕೊಳ್ಳಬೇಕು” ಎಂದು ಹೇಳಿದರು.
ಸೋಮವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಖರ್ಗೆಯವರು ಯಾವ ಅರ್ಥದಲ್ಲಿ, ಯಾವ ಸೂಚನೆ ನೀಡಿದ್ದಾರೋ ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಗೊಂದಲವನ್ನು ಇಲ್ಲೇ ಬಗೆಹರಿಸಬೇಕು ಎಂದು ಹೇಳಿದ್ದಾರೆ. ಹಾಗಾದರೆ ಅದನ್ನು ಇಲ್ಲೇ ಇತ್ಯರ್ಥ ಮಾಡಬೇಕು” ಎಂದು ತಿಳಿಸಿದರು.
ಗೊಂದಲ ಆಡಳಿತಕ್ಕೆ ಹಾನಿಕಾರಕ :
“ನನ್ನ ದೃಷ್ಟಿಯಲ್ಲಿ ಯಾವುದೇ ಗೊಂದಲ ಇರಬಾರದು. ಗೊಂದಲ ಇದ್ದರೆ ಅದನ್ನು ಬಗೆಹರಿಸಿಕೊಂಡು ಆಡಳಿತ ನೀಡಬೇಕು. ಸರ್ಕಾರದೊಳಗಿನ ಗೊಂದಲ ಆಡಳಿತದ ಮೇಲೂ ಪರಿಣಾಮ ಬೀರುತ್ತದೆ. ಪಕ್ಷದ ಒಳಗಿನ ಗೊಂದಲದಿಂದ ಅಧಿಕಾರಿಗಳಲ್ಲಿಯೂ ಗೊಂದಲ ಉಂಟಾಗುವುದು ಸಹಜ. ಆದ್ದರಿಂದ ಗೊಂದಲವನ್ನು ನಿವಾರಿಸಿ, ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಬೇಕು. ಜೊತೆಗೆ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವತ್ತ ಗಮನ ಹರಿಸಬೇಕು” ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.