ನವದೆಹಲಿ, ಜು 11 (Daijiworld News/MSP): ಕರ್ನಾಟಕದ ಕಾಂಗ್ರೆಸ್ - ಜೆಡಿಎಸ್ ನ ರಾಜೀನಾಮೆ ಸಲ್ಲಿಸಿದ ಅತೃಪ್ತರ ಶಾಸಕರಿಗೆ, ಸ್ಪೀಕರ್ ಅವರನ್ನು ಇಂದು ಸಂಜೆ 6 ಗಂಟೆ ಒಳಗೆ ಮತ್ತೊಮ್ಮೆ ಭೇಟಿಯಾಗುವಂತೆ ಹಾಗೂ ಸ್ಪೀಕರ್ ಇಚ್ಚಿಸಿದರೆ ಪುನಃ ರಾಜೀನಾಮೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಇನ್ನೊಂದೆಡೆ ಇದೇ ವಿಚಾರವಾಗಿ ಅತೃಪ್ತ ಶಾಸಕರ ರಾಜಿನಾಮೆ ವಿಚಾರವನ್ನು ಸಂಜೆ 6 ಗಂಟೆಯೊಳಗೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂ ಕೋರ್ಟ್ ಗೆ ಹೇಳಿದ್ದಾರೆ.
ಅತೃಪ್ತ ಶಾಸಕರು ಗುರುವಾರ ಸಂಜೆ ಒಳಗಾಗಿ ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗುವಂತೆ ಆದೇಶ ನೀಡಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ, ಆ ವೇಳೆ ಕಚೇರಿಯಲ್ಲೇ ಇರುವಂತೆ ಸ್ಪೀಕರ್ ರಮೇಶ್ ಕುಮಾರ್ಗೆ ಸೂಚನೆ ನೀಡಿದೆ. ವಿಚಾರಣೆ ವೇಳೆ ಶಾಸಕರ ರಾಜೀನಾಮೆ ವಿಚಾರವನ್ನು ಇವತ್ತಿನೊಳಗೆ ತೀರ್ಮಾನಿಸಿ ಎಂದು ಆದೇಶಿಸಿದೆ.
ಈ ವೇಳೆ ಸ್ಪೀಕರ್ ರಮೇಶ್ ಕುಮಾರ್ " ನನಗೆ ಸಾಂವಿಧಾನಿಕ ನಿಯಮಗಳನ್ನು ಪಾಲಿಸಬೇಕಾಗಿದೆ. ಅಸೆಂಬ್ಲಿ ನಿಯಾಮಾವಳಿಗಳ ಪ್ರಕಾರ ನಾನು ಕ್ರಮ ಕೈಗೊಳ್ಳುತ್ತೇನೆ. ರಾಜಿನಾಮೆ ಸ್ವಯಂ ಪ್ರೇರಿತವೋ ಅಥವಾ ಬಲವಂತವೋ ಎಂಬ ವಿಚಾರಣೆಯನ್ನು ಇಂದು ಮಧ್ಯರಾತ್ರಿ 12 ಗಂಟೆಯ ಒಳಗಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.