ಜೌರಂಗಬಾದ್ , ಜು 11 (Daijiworld News/MSP): ಜೌರಂಗಬಾದ್ ನ ದಿನಸಿ ವ್ಯಾಪಾರಿ ೮೦ ವರ್ಷದ ವಯಸ್ಸಿನ ಕಾಶಿನಾಥ್ ಗೌಲಿ ಮುಂದೆ ಕೀನ್ಯಾದ ಸಂಸದ ರಿಚರ್ಡ್ ತಾಂಗಿ, ಬಂದು ನಿಂತಾಗ ಅವರ ಕಣ್ಣಾಲಿಗಳಲ್ಲಿ ಕಣ್ಣೀರು ಜಿನುಗಿತ್ತು. ಯಾಕೆ ಗೊತ್ತಾ ವಯೋವೃದ್ದ ಕಾಶಿನಾಥ್ ಗೌಲಿಯ ಮುಂದೆ ಕೀನ್ಯಾದ ಸಂಸದ ರಿಚರ್ಡ್ ತಾಂಗಿ ಹಾಗೂ ಅವರ ಪತ್ನಿ ಮಿಚೆಲ್ಲೆ ಮನೆಬಾಗಿಲಲ್ಲಿ ಪ್ರತ್ಯಕ್ಷವಾಗಿದ್ದರು.
ಕೀನ್ಯಾದ ಸಂಸದ ರಿಚರ್ಡ್ ತಾಂಗಿ ಅವರನ್ನು ಕಾಶಿನಾಥ್ ಗೌಲಿಯ ಮನೆ ಮುಂದೆ ಪ್ರತ್ಯಕ್ಷರಾಗುವಂತೆ ಮಾಡಿದ್ದು , 30 ವರ್ಷಗಳ ಹಿಂದಿನ ಸಾಲ ಎಂದರೆ ನಂಬಲೇಬೇಕು.
ಪ್ರಸ್ತುತ ಕೀನ್ಯಾ ನೈರಿಬಾರಿ ಛಾಂಚೆ ಕ್ಷೇತ್ರದ ಸಂಸದರಾಗಿರುವ, ರಿಚರ್ಡ್ ತಾಂಗಿ 30 ವರ್ಷಗಳ ಹಿಂದೆ ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ಕಾಲೇಜಿನಲ್ಲಿ ಓದುತ್ತಿದ್ದರು. ಈ ಸಂದರ್ಭ ಕಾಶೀನಾಥ್ ಗೌಲಿ ಕುಟುಂಬದಿಂದ ನೆರವು ಪಡೆಯುತ್ತಿದ್ದರಂತೆ. ರಿಚರ್ಡ್ ತಾಂಗಿ 1985-1989ರಲ್ಲಿ ರಿಚರ್ಡ್ ಔರಂಗಬಾದ್ ಸ್ಥಳೀಯ ಕಾಲೇಜ್ ನಲ್ಲಿ ಮ್ಯಾನೇಜ್ ಮೆಂಟ್ ಕೋರ್ಸ್ ಅಭ್ಯಾಸಿಸುತ್ತಿದ್ದರು. ಇದೇ ವೇಳೆ ಕೀನ್ಯಾದ ಬಡ ಕುಟುಂಬದಿಂದ ಬಂದ ರಿಚರ್ಡ್ ತಾಂಗಿ, ಅಲ್ಲಿದ್ದ ಕಾಶೀನಾಥ್ ಗೌಲಿ 200 ರೂಪಾಯಿ ಸಾಲ ಪಡೆದಿದ್ದರಂತೆ. ಈ ಹಿಂದೆ ಹಲವು ಬಾರಿ ಭಾರತಕ್ಕೆ ಬಂದಿದ್ದರೂ ಅದು ಅವರ ಅಧಿಕೃತ ಭೇಟಿಯಾಗಿದ್ದರಿಂದ ಗೌಲಿ ಅವರನ್ನು ಭೇಟಿ ಆಗಲು ಸಾಧ್ಯವಾಗಿರಲಿಲ್ಲವಂತೆ.
ಈ ಬಾರಿ ಗೌಲಿ ಅವರನ್ನು ಮತ್ತೆ ಭೇಟಿಯಾಗಲೇ ಬೇಕು ಸಾಲ ಹಿಂತಿರುಗಿಸಬೇಕು ಎಂದು ಭಾರತಕ್ಕೆ ಬಂದು ಸಾಲದ ಹಣ ವಾಪಾಸು ನೀಡಿದ್ದಾರೆ. ಮಾತ್ರವಲ್ಲದೆ ಗೌಲಿ ಅವರ ಮನೆಯಲ್ಲೇ ಊಟ ಮಾಡಿ ಹಳೆಯ ವಿಚಾರಗಳನ್ನೆಲ್ಲಾ ಮೆಲುಕು ಹಾಕಿದ್ದಾರೆ.