ಬೆಂಗಳೂರು, ಜುಲೈ 11 (DaijiworldNews/SM): ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದ ಮುಂದೆ ತೂಗುಗತ್ತಿ ನೇತಾಡುತ್ತಿದೆ. ಆದರೂ, ಸರಕಾರ ಭದ್ರವಾಗಿದೆ ಎಂದು ವಿಶ್ವಾಸವನ್ನು ಆಡಳಿತ ಪಕ್ಷದವರು ವ್ಯಕ್ತಪಡಿಸುತ್ತಿದ್ದಾರೆ. ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ನಾವು ಸಿದ್ಧರಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, 'ಅಧಿವೇಶನದಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ. ನಾವೇ ಬಹುಮತ ಸಾಬೀತು ಪಡಿಸುತ್ತೇವೆ' ಎಂದು ಹೇಳಿದ್ದಾರೆ.
'ಇಬ್ಬರು ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದೇವೆ. ಉಳಿದ ವಿಚಾರದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಎಲ್ಲವನ್ನು ಪರಿಶೀಲನೆ ನಡೆಸಿ ಸ್ಪೀಕರ್ ತಮ್ಮ ತೀರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ' ಎಂದರು. ಬಿಜೆಪಿ ಪಕ್ಷ ದೇಶದಲ್ಲಿ ಸರ್ವಾಧಿಕಾರ ನಡೆಸುತ್ತಿದ್ದು, ಕುದುರೆ ವ್ಯಾಪಾರ ತಡೆಯುವುದು ನಮ್ಮ ಕೆಲಸ. ಪಕ್ಷಕ್ಕೆ ಯಾರೂ ಕೂಡ ದ್ರೋಹ ಬಗೆಯಬಾರದು. ಹೀಗೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.