ಬೆಂಗಳೂರು, ಡಿ. 25 (DaijiworldNews/AK): ಅಟಲ್ಜೀ ಹೆಸರಿನ ಉಚ್ಚಾರಣೆಯೇ ನಮಗೆ ರೋಮಾಂಚನವನ್ನುಂಟು ಮಾಡುತ್ತದೆ. ಆ ಹೆಸರು ಪ್ರೇರಣೆ, ಉತ್ಸಾಹ ತುಂಬುತ್ತದೆ. ಅಂಥ ಶ್ರೇಷ್ಠ ವ್ಯಕ್ತಿತ್ವ ಅವರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಜಿ ಪ್ರಧಾನಮಂತ್ರಿ, ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ ಕಾರ್ಯಕ್ರಮವು ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವಾರು ಬಾರಿ ಅವರು ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಯಡಿಯೂರಪ್ಪ, ಶಂಕರಮೂರ್ತಿ, ರಾಮಚಂದ್ರೇಗೌಡ, ಜಗದೀಶ ಶೆಟ್ಟರ್, ಪಕ್ಷದ ಹಿರಿಯರಿಗೆ ಪ್ರೇರಣೆ ನೀಡಿದ ಮಹಾನ್ ನಾಯಕರು ಎಂದು ನುಡಿದರು.
ಕರ್ನಾಟಕವು ಮುಂದೊಂದು ದಿನ ದಕ್ಷಿಣ ಭಾರತದಲ್ಲಿ ಬಿಜೆಪಿಯ ಭದ್ರ ಕೋಟೆ ಆಗಲಿದೆ ಎಂಬ ದೂರದೃಷ್ಟಿತ್ವ ಅವರಲ್ಲಿತ್ತು. ಕಾರ್ಯಕರ್ತರ ಕುರಿತು ಅದಮ್ಯ ವಿಶ್ವಾಸ ಅವರದಾಗಿತ್ತು ಎಂದು ವಿವರಿಸಿದರು. ಜವಾಹರಲಾಲ್ ನೆಹರೂ ಅವರು ಹಿಂದೆ ಪ್ರಧಾನಮಂತ್ರಿಯಾಗಿದ್ದಾಗ ಅಟಲ್ ಜೀ ಅವರ ಮಾತು, ಭಾಷಣವನ್ನು ಸಂಸತ್ತಿನಲ್ಲಿ ಕೇಳಿದಾಗ ಮುಂದೊಂದು ದಿನ ಅಟಲ್ ಅವರು ಪ್ರಧಾನಿ ಆಗಲಿದ್ದಾರೆ ಎಂದು ತಿಳಿಸಿದ್ದನ್ನು ನೆನಪಿಸಿದರು.
ಸೋಲಿನಿಂದ ಅಂಜುವಂಥ ಪ್ರಶ್ನೆಯೇ ಇಲ್ಲ ಎಂದು ಅಟಲ್ ಜೀ ಅವರು ಹಿಂದೆ ಹೇಳಿದ್ದರು ಎಂದು ವಿವರ ನೀಡಿದರು. ಬಿಜೆಪಿ ದೃಢವಾಗಿ ಕಟ್ಟುವ ಆತ್ಮವಿಶ್ವಾಸವನ್ನು ಕಾರ್ಯಕರ್ತರಲ್ಲಿ ಅವರು ತುಂಬಿದ್ದರು ಎಂದು ಹೇಳಿದರು.
ಕಾಂಗ್ರೆಸ್ಸಿನ ಹಣೆಬರಹ ಬದಲಾಗಲು ಸಾಧ್ಯವಿಲ್ಲ
ಅವರ ದೇಶಭಕ್ತಿ ನಮಗೆ ಪ್ರೇರಣೆ ಆಗಬೇಕು. ಅವರ ದೂರದೃಷ್ಟಿತ್ವವನ್ನು ಅರ್ಥ ಮಾಡಿಕೊಳ್ಳಿ. ಮೋದಿಜೀ ಅವರ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ನಾವು ಮುನ್ನಡೆಯಬೇಕು. ಕಾಂಗ್ರೆಸ್ ಪಕ್ಷದ ಅಪಪ್ರಚಾರಗಳ ನಡುವೆಯೂ ಬಿಜೆಪಿ ನೇತೃತ್ವದ ಕೇಂದ್ರದ ಎನ್ಡಿಎ ಸರಕಾರವು ಭ್ರಷ್ಟಾಚಾರರಹಿತ ಆಡಳಿತವನ್ನು ನರೇಂದ್ರ ಮೋದಿಯವರು ನೀಡುತ್ತಿದ್ದಾರೆ. ಅಸ್ತಿತ್ವ ಕಳಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸ್ಥಿತಿಯನ್ನು ರಾಜ್ಯದ ಪಟ್ಟಣ ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿದೆ ಎಂದರು.
ಇವಿಎಂ ಇರಲಿ; ಬ್ಯಾಲೆಟ್ ಇರಲಿ ಕಾಂಗ್ರೆಸ್ಸಿನ ಹಣೆಬರಹ ಬದಲಾಗಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಅವರು ನುಡಿದರು. ಅಟಲ್ ಜೀ, ಲಾಲ್ ಕೃಷ್ಣ ಅಡ್ವಾಣಿ ಜೀ ಅವರಂಥ ಶ್ರೇಷ್ಠರ ನಾಯಕತ್ವ ನಮಗೆ ಸಿಕ್ಕಿದೆ. ಮೋದಿಜೀ, ಅಮಿತ್ ಶಾ ಜೀ, ನಡ್ಡಾ ಜೀ ಅವರ ನೇತೃತ್ವದಲ್ಲಿ ಬಿಜೆಪಿ ದಾಪುಗಾಲು ಹಾಕುತ್ತಿದೆ. ಪಶ್ಚಿಮ ಬಂಗಾಲದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು