National
ಮಾಜಿ ಪ್ರಧಾನಿ ಜನ್ಮದಿನಕ್ಕೊಂದು ಜೀವನಗಾಥೆಯ ಭಿತ್ತರದೊಂದಿಗೆ ಅಕ್ಷರ ನಮನ!
- Thu, Dec 25 2025 02:49:09 PM
-
ನವದೆಹಲಿ, ಡಿ. 25 (DaijiworldNews/TA): ‘ದುನಿಯಾ ಕೆ ಸಾರೆ ಸುಖ್ ಫೀಚೆ, ಮೇರಾ ದೇಶ್ ಫೆಹಲೇ’ ಎಂಬ ಮಾತು ರಾಜಕೀಯ ಘೋಷಣೆಯಂತೆ ಅಲ್ಲ, ಬದುಕಿನ ತತ್ವದಂತೆ ಬದುಕಿದ ನಾಯಕ ಅಟಲ್ ಬಿಹಾರಿ ವಾಜಪೇಯಿ. ಈ ವಾಕ್ಯವನ್ನು ಇಷ್ಟು ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ಹೇಳಲು ಸಾಧ್ಯವಾಗಿದ್ದು ವಾಜಪೇಯಿ ಅವರಿಗಷ್ಟೇ ಎಂಬುದು ಅವರ ಬದುಕು ಮತ್ತು ಆಡಳಿತವೇ ಸಾಕ್ಷಿ. ಕವಿಯಾಗಿ, ಪತ್ರಕರ್ತರಾಗಿ, ರಾಜಕಾರಣಿಯಾಗಿ ಹಾಗೂ ದೇಶದ ಚುಕ್ಕಾಣಿ ಹಿಡಿದು ಐದು ವರ್ಷಗಳ ಕಾಲ ಪೂರ್ಣಾವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೊದಲ ಕಾಂಗ್ರೆಸೇತರ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಾಜಪೇಯಿ, ಭಾರತೀಯ ರಾಜಕೀಯಕ್ಕೆ ವಿಭಿನ್ನ ಸಂಸ್ಕೃತಿ ಮತ್ತು ನೈತಿಕತೆಯನ್ನು ಕೊಡುಗೆಯಾಗಿ ನೀಡಿದರು.

ವಾಜಪೇಯಿ ಎಂಬ ಅಧ್ಯಾಯದ ಪುಟಗಳನ್ನು ತಿರುವಿದಂತೆ, ಅಧಿಕಾರದ ರಾಜಕಾರಣಕ್ಕಿಂತ ಸೇವೆಯ ರಾಜಕಾರಣವೇ ಮುಂಚೆ ಬರುತ್ತದೆ. ಅಲ್ಲಿ ನಮಗೆ ಒಬ್ಬ ಅಟಲ್ ಸೇವಕನ ಮುಖ ಕಾಣಿಸುತ್ತದೆ. ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುವ ಸಂವೇದನಾಶೀಲ ಬಿಹಾರಿಯನ್ನು ನೋಡುತ್ತೇವೆ. ಸಿದ್ಧಾಂತಗಳ ಕಠಿಣತೆಯ ನಡುವೆಯೂ ಎಲ್ಲರನ್ನು ಒಟ್ಟುಗೂಡಿಸಿಕೊಂಡು ನಡೆದ ಸಾಮರಸ್ಯದ ಪಯಣ ಗೋಚರಿಸುತ್ತದೆ. ಅದಕ್ಕಾಗಿಯೇ ಅವರು ಇಂದಿಗೂ ‘ಮೋರಲ್ ಪಾಲಿಟಿಕ್ಸ್’ ಎಂಬ ಅಪರೂಪದ ಗುರುತಿನ ಪ್ರತೀಕವಾಗಿ ಉಳಿದಿದ್ದಾರೆ. ಈ ದಿವ್ಯ ಚೈತನ್ಯದ ಜೀವನದ ಪುಟಗಳನ್ನು ಮೆಲುಕು ಹಾಕುತ್ತಾ ಹೋದಂತೆ ನಮಗೆ ಅದೆಷ್ಟೋ ಸ್ಪೂರ್ತಿದಾಯಕ ಅಂಶಗಳು ತೆರೆಯುತ್ತವೆ.
ಗ್ವಾಲಿಯರ್ನಿಂದ ದೇಶದ ಶಿಖರದವರೆಗೆ : ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣಾದೇವಿ ದಂಪತಿಗಳಿಗೆ ಜನಿಸಿದ ಅಟಲ್ ಬಿಹಾರಿ ವಾಜಪೇಯಿ, ಬಾಲ್ಯದಿಂದಲೇ ರಾಷ್ಟ್ರಭಕ್ತಿಯ ಚಿಂತನೆಗಳನ್ನು ಹೊತ್ತು ಬೆಳೆದವರು. ಸ್ಥಳೀಯವಾಗಿ ಶಿಕ್ಷಣ ಪೂರೈಸಿದ ಅವರು, ಇಂದಿನ ರಾಣಿ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ಪದವಿ ಮತ್ತು ವಿಕ್ಟೋರಿಯಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಯುವಕನಾಗುತ್ತಿದ್ದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಅವರ ನಂಟು ಗಟ್ಟಿಯಾಯಿತು.
ಕ್ವಿಟ್ ಇಂಡಿಯಾ ಚಳವಳಿ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ವಾಜಪೇಯಿ, ‘ರಾಷ್ಟ್ರಧರ್ಮ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕವಿತೆ ಮತ್ತು ಲೇಖನಗಳ ಮೂಲಕ ದೇಶಭಕ್ತಿಯನ್ನು ಜನಮನಕ್ಕೆ ತಲುಪಿಸಿದರು. ದೀನ್ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಒಡನಾಟವು ಅವರ ರಾಜಕೀಯ ದಿಕ್ಕನ್ನು ನಿರ್ಧರಿಸಿತು.
ಮುಖರ್ಜಿ-ದಯಾಳ್ ಜೊತೆ ಬೆಳೆದ ನಾಯಕ : ಶ್ಯಾಮ ಪ್ರಸಾದ್ ಮುಖರ್ಜಿ ಸ್ಥಾಪಿಸಿದ ಜನಸಂಘದ ಪ್ರಮುಖ ಸಹಾಯಕರಾಗಿ ವಾಜಪೇಯಿ ಕೆಲಸ ಮಾಡಿದರು. ಕಲಂ 370 ವಿರೋಧದ ಹೋರಾಟದ ಸಂದರ್ಭದಲ್ಲಿ 1953ರಲ್ಲಿ ಮುಖರ್ಜಿ ಬಂಧನಕ್ಕೊಳಗಾಗಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ವಾಜಪೇಯಿಯನ್ನು ಆಳವಾಗಿ ಕಾಡಿತು. “ನಿನ್ನ ಭವಿಷ್ಯ ದೊಡ್ಡದು” ಎಂದು ಮುಖರ್ಜಿ ಹೇಳಿದ ಮಾತುಗಳನ್ನು ವಾಜಪೇಯಿ ಜೀವನಪೂರ್ತಿ ನೆನಪಿಸಿಕೊಂಡರು.
1968ರಲ್ಲಿ ದೀನ್ ದಯಾಳ್ ಉಪಾಧ್ಯಾಯರ ಅಕಾಲಿಕ ಸಾವಿನಿಂದ ಮತ್ತಷ್ಟು ದುಃಖಿತರಾದರೂ, ವಾಜಪೇಯಿ ಛಲ ಬಿಡಲಿಲ್ಲ. ಜನಸಂಘದ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿ, ರಾಜಕೀಯ ಹೋರಾಟವನ್ನು ಮುಂದುವರಿಸಿದರು.
ಬಲರಾಮಪುರದಿಂದ ಪ್ರಧಾನಮಂತ್ರಿ ಭವನದವರೆಗೆ : ಉತ್ತರ ಪ್ರದೇಶದ ಬಲರಾಮಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ವಾಜಪೇಯಿ ರಾಜಕೀಯ ಜೀವನಕ್ಕೆ ಅಧಿಕೃತವಾಗಿ ಕಾಲಿಟ್ಟರು. ಸೋಲು–ಗೆಲುವುಗಳ ನಡುವೆಯೇ 1996ರಲ್ಲಿ 13 ದಿನಗಳ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಕೊನೆಗೆ 1999-2004ರ ಅವಧಿಯಲ್ಲಿ ಐದು ವರ್ಷಗಳ ಪೂರ್ಣಾವಧಿ ಪ್ರಧಾನಿಯಾಗಿ ದೇಶದ ಮೊದಲ ಕಾಂಗ್ರೆಸೇತರ ಸರ್ಕಾರಕ್ಕೆ ಸ್ಥಿರತೆ ನೀಡಿದರು.
ವಿದೇಶಾಂಗ ವೇದಿಕೆಯಲ್ಲಿ ಭಾರತದ ಧ್ವನಿ : ವಿದೇಶಾಂಗ ಸಚಿವರಾಗಿದ್ದಾಗ ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿ ಜಾಗತಿಕ ವೇದಿಕೆಯಲ್ಲಿ ಭಾರತದ ಭಾಷಾ ಗೌರವವನ್ನು ಹೆಚ್ಚಿಸಿದರು. ನಂತರ ಭಾರತೀಯ ಜನತಾ ಪಕ್ಷವನ್ನು ಕಟ್ಟಿಬಳೆಸಿ ಪ್ರಧಾನಿಯ ಹಾದಿಯನ್ನು ಮುಟ್ಟಿದರು.
ಸಿದ್ಧಾಂತ ಬೇರೆ, ಆಡಳಿತ ಬೇರೆ - ಅಟಲ್ ಮಾರ್ಗ : ವಾಜಪೇಯಿ ಸಿದ್ಧಾಂತವನ್ನು ಆಡಳಿತದ ಮೇಲೆ ಬಲವಂತವಾಗಿ ಹೇರಲಿಲ್ಲ. ಸುಮಾರು 20 ಪಕ್ಷಗಳೊಂದಿಗೆ ಮೈತ್ರಿ ಸರ್ಕಾರ ರಚಿಸಿ ಸಮನ್ವಯದ ರಾಜಕಾರಣಕ್ಕೆ ಹೊಸ ಅರ್ಥ ಕೊಟ್ಟರು. ಮಂಡಲ್ ಆಯೋಗದ ಅನುಷ್ಠಾನವನ್ನು ಸಮತೋಲನದಿಂದ ನಿಭಾಯಿಸಿದರು. ಅತಿರೇಕ ರಾಜಕೀಯಕ್ಕೆ ವಿರೋಧ ವ್ಯಕ್ತಪಡಿಸಿ, ಎಲ್ಲ ವರ್ಗಗಳನ್ನೂ ಒಟ್ಟುಗೂಡಿಸುವ ಧೋರಣೆಯನ್ನು ಅನುಸರಿಸಿದರು.
ಕರ್ನಾಟಕದೊಂದಿಗೆ ಆತ್ಮೀಯ ನಂಟು : ಬೆಂಗಳೂರು ಮೆಟ್ರೋ ಉದ್ಘಾಟನೆ, ಮಹಾದಾಯಿ ಯೋಜನೆಗೆ ತಾತ್ವಿಕ ಅನುಮೋದನೆ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧನ - ಇವೆಲ್ಲವು ಕರ್ನಾಟಕದೊಂದಿಗೆ ಅವರ ಆಪ್ತ ಸಂಬಂಧವನ್ನು ತೋರಿಸುತ್ತವೆ. ಎಂ.ಜಿ. ರಸ್ತೆಯ ಕಾಫಿ ಹೌಸ್ನ ಮಸಾಲ ದೋಸೆ, ಜೋಗ ಜಲಪಾತದ ಸೌಂದರ್ಯಕ್ಕೆ ಬರೆದ ಕವಿತೆ - ಇವೆಲ್ಲವು ಅವರ ಮಾನವೀಯತೆಯ ಪ್ರತೀಕ.
ಅಜಾತಶತ್ರುವಿನ ಅಭಿವೃದ್ಧಿ ಮುದ್ರೆ : 1999-2004ರ ಅವಧಿಯಲ್ಲಿ ವಾಜಪೇಯಿ ಸರ್ಕಾರ ಅಂತ್ಯೋದಯ ಅನ್ನ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸರ್ವಶಿಕ್ಷಾ ಅಭಿಯಾನ, ಸುವರ್ಣ ಚತುಷ್ಕೋನ ರಸ್ತೆ ಯೋಜನೆ, ನ್ಯೂ ಟೆಲಿಕಾಂ ಪಾಲಿಸಿ ಮುಂತಾದ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಗಟ್ಟಿದ ಅಡಿಪಾಯ ಹಾಕಿತು. ಈ ಯೋಜನೆಗಳು ಕಾಗದದ ಮಟ್ಟದಲ್ಲಿ ಮಾತ್ರವಲ್ಲ, ಸಾಮಾನ್ಯ ಜನರ ಬದುಕಿನಲ್ಲಿ ನೈಜ ಬದಲಾವಣೆ ತಂದವು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಟಲ್ ಕೊಡುಗೆ : ಭಾರತವನ್ನು ಜಾಗತಿಕ ಶಕ್ತಿರಾಷ್ಟ್ರಗಳ ಸಾಲಿಗೆ ನಿಲ್ಲಿಸಿದ ಧೈರ್ಯಮಯ ನಿರ್ಣಯಗಳ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ದೂರದೃಷ್ಟಿ ಅಡಗಿದೆ. 1998ರಲ್ಲಿ ನಡೆದ ಪೋಖ್ರಾನ್-2 ಅಣುಪರೀಕ್ಷೆಗಳ ಮೂಲಕ ಭಾರತವನ್ನು ಪರಮಾಣು ಶಕ್ತಿಯ ರಾಷ್ಟ್ರವೆಂದು ವಿಶ್ವಕ್ಕೆ ಘೋಷಿಸಿದವರು ವಾಜಪೇಯಿ. ಅಂತರರಾಷ್ಟ್ರೀಯ ಒತ್ತಡಗಳು, ಆರ್ಥಿಕ ನಿರ್ಬಂಧಗಳ ಬೆದರಿಕೆಗಳ ನಡುವೆಯೂ ಅವರು ತೋರಿದ ದೃಢ ನಿಲುವು ಭಾರತದ ಸ್ವಾಭಿಮಾನವನ್ನು ಗಟ್ಟಿಗೊಳಿಸಿತು. ವಿಜ್ಞಾನ ಕ್ಷೇತ್ರದಲ್ಲಿ ಅವರ ಕೊಡುಗೆ ಅಣುಶಕ್ತಿಗೆ ಮಾತ್ರ ಸೀಮಿತವಾಗಿರಲಿಲ್ಲ. 2003ರಲ್ಲಿ ಚಂದ್ರಯಾನ–1 ಯೋಜನೆಗೆ ಅನುಮೋದನೆ ನೀಡಿ, ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ಹೊಸ ದಿಕ್ಕು ಮತ್ತು ಆತ್ಮವಿಶ್ವಾಸ ನೀಡಿದರು. ಆ ನಿರ್ಣಯವೇ ಮುಂದೆ ಭಾರತವನ್ನು ಚಂದ್ರಯಾನ ಮತ್ತು ಮಂಗಳಯಾನಗಳಂತಹ ಮಹತ್ವದ ಸಾಧನೆಗಳತ್ತ ಕರೆದೊಯ್ದಿತು.
ಅಟಲ್ ಬಿಹಾರಿ ವಾಜಪೇಯಿ ರಾಜಕಾರಣವನ್ನು ಕೇವಲ ಅಧಿಕಾರದ ಹೋರಾಟವೆಂದು ಕಂಡಿಲ್ಲ. ಅದು ನೈತಿಕತೆ, ಸಂಯಮ ಮತ್ತು ಸಾಮರಸ್ಯದ ಅಭ್ಯಾಸ ಎಂದು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದರು. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಲೇ ರಾಷ್ಟ್ರಹಿತವನ್ನು ಮೊದಲಿಗಿಡುವ ಅವರ ಧೋರಣೆ ಇಂದಿನ ರಾಜಕಾರಣಕ್ಕೆ ದೀಪಸ್ತಂಭದಂತಿದೆ.
ಅಟಲ್ ಬಿಹಾರಿ ವಾಜಪೇಯಿ ನಿಧನ : ಭಾರತದ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಆಗಸ್ಟ್ 16, 2018ರಂದು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು 93ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಸದಾ ಅಮರವಾಗಿ ಉಳಿಯಲಿದೆ.‘ದೇಶ ಮೊದಲು’ ಎಂಬ ಮಂತ್ರವನ್ನು ಘೋಷಣೆಯಲ್ಲೇ ಅಲ್ಲ, ಕಾರ್ಯರೂಪದಲ್ಲೇ ಅಳವಡಿಸಿಕೊಂಡ ನಾಯಕ ವಾಜಪೇಯಿ. ಅವರ ಕನಸಿನ ಭಾರತ ಇಂದಿಗೂ ನಮ್ಮ ಮುಂದೆ ಗುರಿಯಾಗಿ ನಿಂತಿದೆ. ಆ ಗುರಿಯತ್ತ ಪ್ರಾಮಾಣಿಕವಾಗಿ ನಡೆಯುವುದೇ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಈ ಮೂಲಕ ಅಜಾತಶತ್ರುವಿಗೊಂದು ಅಕ್ಷರನಮನ.