ಬೆಂಗಳೂರು, ಜು 11 (DaijiworldNews/SM): ಕರ್ನಾಟಕದ ರಾಜಕೀಯದಲ್ಲಿ ದಿನಕ್ಕೊಂದು ಹೈಡ್ರಾಮ ನಡೆಯುತ್ತಿದೆ. ಒಂದೆಡೆ ರಾಜೀನಾಮೆಯ ಸಂಕಷ್ಟವಾದರೆ, ಈ ನಡುವೆ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ವಿಧಾನ ಸಭೆಯ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ಆರಂಭಗೊಳ್ಳಲಿದೆ.
ಮೊದಲ ದಿನದ ಅಧಿವೇಶನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಶಾಸಕರ ರಾಜೀನಾಮೆಯಿಂದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ಬಹುಮತ ಕಳೆದುಕೊಂಡಿದೆ. ಈ ಹಿನ್ನೆಲೆ ಮೊದಲ ದಿನದ ಅಧಿವೇಶನದಲ್ಲಿ ವಿಶ್ವಾಸ ಮತಯಾಚನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜುಲೈ 12 ರಿಂದ 21ರ ತನಕ ಮುಂಗಾರು ಅಧಿವೇಶನ ನಡೆಯಲಿದೆ. ಅಧಿವೇಶನದ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆಯನ್ನು ಹಾಕಲಾಗಿದೆ. ಪ್ರತಿಪಕ್ಷ ಬಿಜೆಪಿ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಆರೋಪಿಸುತ್ತಿದೆ. ಮುಂಗಾರು ಅಧಿವೇಶನದ ಮೊದಲ ದಿನ ಬಿಜೆಪಿ ಸರ್ಕಾರ ವಿಶ್ವಾಸಮತವನ್ನು ಯಾಚಿಸಲಿ ಎಂಬುವುದಾಗಿ ಬಿಜೆಪಿ ಪಟ್ತು ಹಿಡಿಯಲಿದೆ ಎನ್ನಲಾಗಿದೆ.
ಬಿಜೆಪಿ ನಡೆಸಿರುವ ತಂತ್ರಕ್ಕೆ ತಿರುಗೇಟು ನೀಡಲು ಮೈತ್ರಿ ಸರಕಾರ ಪ್ರತಿತಂತ್ರವನ್ನು ಹೆಣೆದಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲಾ ಶಾಸಕರಿಗೆ ಶುಕ್ರವಾರ ಸದನಕ್ಕೆ ಹಾಜರಾಗುವಂತೆ ವಿಪ್ ಜಾರಿಗೊಳಿಸುವ ಸಾಧ್ಯತೆ ಇದೆ. ವಿಪ್ ಜಾರಿಯಾದರೆ ಶಾಸಕರು ಸದನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಮತ್ತು ಆಯ್ಕೆಯಾದ ಪಕ್ಷದ ಪರವಾಗಿಯೇ ಮತಹಾಕಬೇಕಿದೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿ ಪಕ್ಷದ ನಡೆ ಕುತೂಹಲ ಮೂಡಿಸಿದ್ದು, ಸರಕಾರ ಬಹುಮತ ಸಾಬೀತು ಪಡಿಸುತ್ತಾ ಎನ್ನುವ ಪ್ರಶ್ನೆ ಮೂಡಿದೆ.