ಬೆಂಗಳೂರು, ಜು 11 (DaijiworldNews/SM): ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಗುರುವಾರದಂದು ಬೆಂಗಳೂರಿಗೆ ಬಂದು ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿ ಮತ್ತೆ ಮುಂಬೈಗೆ ತೆರಳಿದ್ದಾರೆ.
ಗುರುವಾರ ಸಂಜೆ ಆರು ಗಂಟೆಗೆ ಸ್ಪೀಕರ್ ಕಚೇರಿಗೆ ಆಗಮಿಸಿ ರಾಜೀನಾಮೆ ಸಲ್ಲಿಸಿದ ಅತೃಪ್ತ ಶಾಸಕರು ಮತ್ತೆ ಮರಳಿ ಮುಂಬೈಗೆ ಹೋಗಿದ್ದಾರೆ. ಸ್ಪೀಕರ್ ಜತೆ ಚರ್ಚೆ ಮುಗಿಯುತ್ತಿದ್ದಂತೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಎರಡು ವಿಮಾನಗಳಲ್ಲಿ ಮುಂಬೈಗೆ ಹೋಗಿದ್ದಾರೆ. ಮೊದಲ ವಿಮಾನದಲ್ಲಿ ಆರು ಶಾಸಕರು ಹಾಗೂ ಮತ್ತೊಂದು ವಿಮಾನದಲ್ಲಿ ಐವರು ಶಾಸಕರು ಪ್ರಯಾಣಿಸಿದ್ದಾರೆ. ಸಾಲದಕ್ಕೆ ಶಾಸಕ ಆನಂದ್ ಸಿಂಗ್ ಕೂಡ ಅತೃಪ್ತರೊಂದಿಗೆ ಮುಂಬೈಗೆ ತೆರಳಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಅವರಿಗೆಲ್ಲ ಎಸ್ಕಾರ್ಟ್ ನೀಡಲಾಗಿತ್ತು. ಸ್ಥಳೀಯ ಪೊಲೀಸರು ಕೂಡ ಬಿಗಿ ಭದ್ರತೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮೈತ್ರಿ ಪಕ್ಷದ ಮುಖಂಡರಿಗೆ ಅತೃಪ್ತರನ್ನು ಭೇಟಿಯಾಗಲು ಹಾಗೂ ಮಾತನಾಡಲು ಸಾಧ್ಯವಾಗಿಲ್ಲ. ಅಲ್ಲದೆ ಮಾಧ್ಯಮಗಳಿಗೂ ಕೂಡ ಅತೃಪ್ತರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶುಕ್ರವಾರದಿಂದ ಅಧಿವೇಶನ ಆರಂಭಗೊಳ್ಳಲಿದ್ದು, ಕಲಾಪಕ್ಕೆ ಎಲ್ಲಾ ಶಾಸಕರು ಹಾಜರಾಗಬೇಕು ಎಂದು ವಿಪ್ ಹೊರಡಿಸಿದ್ದರೂ ಕೂಡ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಅತೃಪ್ತರು ಮುಂಬೈಗೆ ತೆರಳಿದ್ದು ಸಾಕಷ್ಟು ಕುತೂಹಲವನ್ನುಂಟು ಮಾಡಿದೆ.