ಬೆಂಗಳೂರು, ಜು 11 (DaijiworldNews/SM): ನಿಯಮಗಳನ್ನು ಪಾಲಿಸದೇ ಶಾಸಕರ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಹೇಳುವ ಮೂಲಕ ಅತೃಪ್ತರ ರಾಜೀನಾಮೆ ಅಂಗೀಕಾರ ಸದ್ಯಕ್ಕೆ ಮಾಡುವುದಿಲ್ಲ ಎಂಬ ಸುಳಿವನ್ನು ಸ್ಪೀಕರ್ ರಮೇಶ್ ಕುಮಾರ್ ರವಾನಿಸಿದ್ದಾರೆ.
ಅತೃಪ್ತ ಶಾಸಕರಿಂದ ರಾಜೀನಾಮೆ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಕುಮಾರ್, ಈ ಹಿಂದೆ ನಾನು ವಿಳಂಬ ನೀತಿ ಅನುಸರಿಸಿಲ್ಲ. ರಾಜೀನಾಮೆ ನೀಡುವ ಮುನ್ನ ನಿಯಮಗಳನ್ನು ಪಾಲಿಸಬೇಕಿತ್ತು. ನಿಯಮ ಮೀರಿ ರಾಜೀನಾಮೆ ಸಲ್ಲಿಸಿದ 8 ಮಂದಿ ಅತೃಪ್ತ ಶಾಸಕರಿಗೆ ನಿಯಮನುಸಾರ ಸಲ್ಲಿಸಲು ಸೂಚಿಸಿದ್ದೇನೆ.
ನಾನು ಸಂವಿಧಾನ ಬದ್ಧವಾಗಿ ನಡೆದುಕೊಳ್ಳುತ್ತಿದ್ದು, ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಶಾಸಕರ ರಾಜೀನಾಮೆ ಸಂಬಂಧ ನಿರ್ಧಾರ ತಿಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಕಲಾಪದ ಇಡೀ ಪ್ರಕ್ರಿಯೆಯನ್ನು ಚಿತ್ರೀಕರಣ ಹಾಗೂ ದಾಖಲೆಗಳನ್ನು ಸುಪ್ರೀಂಕೋರ್ಟಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಅತೃಪ್ತ ಶಾಸಕರು ಇಂದು ಸಲ್ಲಿಸಿರುವ ರಾಜೀನಾಮೆ ಪತ್ರಗಳನ್ನು ಇಂದೇ ಪರಿಶೀಲನೆ ನಡೆಸಲಾಗುವುದು. ವಿಚಾರಣೆ ನಡೆಸಿದ ಬಳಿಕ ಮುಂದಿನ ನಿರ್ಧಾರವನ್ನು ತಿಳಿಸಲಾಗುವುದು ಎಂದು ರಮೇಶ್ ಕುಮಾರ್ ಹೇಳಿದರು.