ಬೆಂಗಳೂರು, ಜು12 (Daijiworld News/MSP): ಮೈತ್ರಿ ಸರ್ಕಾರದ 16 ಮಂದಿ ಅತೃಪ್ತ ಶಾಸಕರ ರಾಜೀನಾಮೆಯಿಂದ ಉಂಟಾಗಿರುವ ರಾಜ್ಯ ರಾಜಕೀಯ ಬಿಕ್ಕಟ್ಟಿನ ನಡುವೆ ಇಂದು ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಲಿದೆ. ಇಂದಿನಿಂದ ಜು.26ರವರೆಗೆ ಅಧಿವೇಶನ ನಡೆಯಲಿದೆ. ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಈ ಬಾರಿಯ ಅಧಿವೇಶನ ಮತ್ತೊಂದು ಕೋಲಾಹಲಕ್ಕೆ ಕಾರಣವಾಗಬಹುದು. ಇನ್ನೊಂದೆಡೆ ಅಧಿವೇಶನದ ಹಿನ್ನೆಲೆ ಕಡ್ಡಾಯವಾಗಿ ಸದನಕ್ಕೆ ಹಾಜರಾಗಬೇಕೆಂದು ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ತನ್ನ ಎಲ್ಲಾ ಶಾಸಕರಿಗೆ ವಿಪ್ ಜಾರಿಗೊಳಿಸಿವೆ.
ವಿತ್ತೀಯ ವಿಧೇಯಕಗಳು ಹಾಗೂ ಇತರೆ ಕಾರ್ಯಸೂಚಿಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಸರ್ಕಾರದ ಪರ ಮತ ಚಲಾಯಿಸುವಂತೆ ವಿಪ್ ಜಾರಿಗೊಳಿಸಲಾಗಿದೆ. ಸಧ್ಯ ವಿಪ್ ಜಾರಿಯಾಗಿರುವ ಕಾರಣ ಕಲಾಪಕ್ಕೆ ಗೈರಾಗಬೇಕೋ ಅಥವಾ ಹಾಜರಾಗಬೇಕೋ ಎಂಬ ಗೊಂದಲದಲ್ಲಿ ಇದ್ದಾರೆ. ಅಧಿವೇಶನದ ಮೊದಲ ದಿನವಾದ ಇಂದು ಸಂತಾಪ ಸೂಚನೆಯ ಕಾರ್ಯಸೂಚಿ ನಡೆಯಲಿದೆ. ಸೋಮವಾರದಿಂದ ಸಕ್ರಿಯ ಕಲಾಪ ನಡೆಯಲಿದೆ.
ಶಾಸಕರ ಗೈರು ಹಿನ್ನಲೆಯಲ್ಲಿ ಅಲ್ಪಮತಕ್ಕೆ ಕುಸಿಯುವ ಸರಕಾರದ ಕುರಿತಾಗಿ ಗಲಾಟೆ ಮಾಡುವ ಬಿಜೆಪಿ ಶಾಸಕರನ್ನು ಸ್ಪೀಕರ್ ಅನರ್ಹ ಗೊಳಿಸುವ ತಂತ್ರ ಅನುಸರಿಸುವುದರಿಂದ ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಅವರು ಸದನದಲ್ಲಿ ತಾಳ್ಮೆಯಿಂದ ವರ್ತಿಸಬೇಕೆಂದು ಪಕ್ಷದ ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.