ಬೆಂಗಳೂರು, ಜು12 (Daijiworld News/MSP): ಜೆಡಿಎಸ್ನೊಂದಿಗೆ ಒಂದು ಸಾರಿ ಸರ್ಕಾರ ರಚನೆ ಮಾಡಿ ಪಾಠ ಕಲಿತಿದ್ದೇವೆ. ಅವರೊಂದಿಗೆ ಮತ್ತೊಮ್ಮೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಲು ಸಾಧ್ಯವೇ ? ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿ ಬೆನ್ನಲ್ಲೇ ಬಿಜೆಪಿ - ಜೆಡಿಎಸ್ ದೋಸ್ತಿ ಸಾಧ್ಯತೆ ಹಾಗು ಇದಕ್ಕೆ ತಕ್ಕಂತೆ ಜೆಡಿಎಸ್ ಮುಖಂಡ ಸಾ .ರಾ ಮಹೇಶ್ ಅವರು ಗುರುವಾರ ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದು ಸ್ಪೋಟಕ ಸುದ್ದಿಯಾಗಿತ್ತು. ಆದರೆ ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭೇಟಿ ಕೇವಲ ಕಾಕತಾಳೀಯವಾಗಿತ್ತು ಅಷ್ಟೇ. ಸಾ.ರಾ.ಮಹೇಶ್ ಮತ್ತು ಬಿಜೆಪಿ ಮುಖಂಡರಾದ ಕೆ ಎಸ್. ಈಶ್ಚರಪ್ಪ ಮತ್ತು ಮುರಳೀಧರ್ ರಾವ್ ಅವರ ಭೇಟಿಗೆ ವಿಶೇಷ ಅರ್ಥ ನೀಡಬೇಕಾಗಿಲ್ಲ. ನಾವು ಹಿಂದಿನ ಪಾಠ ಇನ್ನು ಮರೆತಿಲ್ಲ. ಜೆಡಿಎಸ್ ಜತೆ ಸರ್ಕಾರ ಮಾಡಲು ಸಾಧ್ಯವೇ ? ಈ ಹಿಂದೆ ಜೆಡಿಎಸ್ ಪಕ್ಷದೊಂದಿಗೆ ಕೈ ಜೋಡಿಸಿ ಸರ್ಕಾರ ರಚಿಸಿದ ಬಳಿಕ ಹಿಂಸೆ ಅನುಭವಿಸಿರುವುದು ಮರೆತಿಲ್ಲ . ಹೀಗಾಗಿ ಅನಗತ್ಯವಾದ ಗೊಂದಲ ಬೇಡ ಎಂದರು.
ಈ ಭೇಟಿ ಆಕಸ್ಮಿಕವಾಗಿ ನಡೆದದ್ದು. ಹೊಸ ಮೈತ್ರಿ ಸಾಧ್ಯತೆ ಎಂಬುದೆಲ್ಲಾ ಕೇವಲ ಊಹಾಪೋಹ ಮತ್ತು ಗಾಳಿ ಸುದ್ದಿ. ಈ ಭೇಟಿಯಾಗಿದ್ದನ್ನೇ ಮುಂದಿಟ್ಟು ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಯಾವ ಪ್ರಯೋಜನವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಮಜಾಯಿಷಿ ನೀಡಿದ್ದಾರೆ.