ಬೆಂಗಳೂರು, ಜು12(Daijiworld News/SS): ರಾಜೀನಾಮೆಯ ಪ್ರಸ್ತಾಪ ಮಾಡುವುದು ಬೇಡ. ಏನು ಬೇಕಾದರೂ ಆಗಬಹುದು. ಧೈರ್ಯಗೆಡದೆ ಪರಿಸ್ಥಿತಿ ಎದುರಿಸು ಎಂದು ದೇವೇಗೌಡ ಅವರು ಸಿಎಂ ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ.
ಅಧಿವೇಶನ ನಡೆಯುವ ಮೊದಲು ಎಚ್.ಡಿ.ಕುಮಾರಸ್ವಾಮಿ ಅವರು ತಂದೆ ದೇವೇಗೌಡರ ಮನೆಗೆ ಧಾವಿಸಿದ್ದರು. ಈ ವೇಳೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಏನೂ ಬೇಕಾದರೂ ಆಗಬಹುದು. ಆದರೆ ಧೈರ್ಯದಿಂದಿರು. ಏನೇ ಆದರೂ ಎದುರಿಸಲು ಸಿದ್ಧನಾಗಿರು ಎಂದು ತಿಳಿಸಿದ್ದಾರೆ.
ರಾಜ್ಯ ರಾಜಕಾರಣ ಮತ್ತೊಂದು ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಇಂದಿನಿಂದ ವಿಧಾನಸೌಧದಲ್ಲಿ ಮುಂಗಾರು ಅಧಿವೇಷನ್ ಆರಂಭವಾಗುತ್ತದೆ. ಅಧಿವೇಷನದಲ್ಲಿ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜಾಗಿದೆ. ಮತ್ತೊಂದೆಡೆ ಶಾಸಕರ ರಾಜೀನಾಮೆ ಸರಣಿಯಿಂದ ಕಂಗೆಟ್ಟಿರುವ ಮೈತ್ರಿ ನಾಯಕರು ಪ್ರತಿಪಕ್ಷಗಳ ಆರೋಪಕ್ಕೆ ಉತ್ತರ ನೀಡಲು ಸಜ್ಜಾಗಿದ್ದಾರೆ. ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ರಾಜ್ಯ ರಾಜಕಾರಣ ದೇಶದ ಗಮನ ಸೆಳೆದಿದೆ.
ಇನ್ನೊಂದೆಡೆ ಅತೃಪ್ತ ಶಾಸಕರ ರಾಜೀನಾಮೆಯನ್ನು ತಕ್ಷಣಕ್ಕೆ ಅಂಗೀಕರಿಸಲು ಸ್ಪೀಕರ್ ನಿರಾಕರಿಸಿರುವುದು ವಿರೋಧ ಪಕ್ಷದ ನಡೆಯ ಬಗ್ಗೆ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.