ಬೆಂಗಳೂರು, ಜು 12 (Daijiworld News/MSP): ಅತೃಪ್ತ ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಸಂಕಷ್ಟದಲ್ಲಿದ್ದು ಈ ನಡುವೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದಾರೆ. ವಿಧಾನಸಭೆ ಕಲಾಪದ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಘೋಷಣೆ ಮಾಡಿದ್ದು, ಸ್ಪೀಕರ್ಗೆ ಸಮಯ ನಿಗದಿಪಡಿಸಲು ಮನವಿ ಮಾಡಿದ್ದಾರೆ.
ಈ ಬಗ್ಗೆ ಇಂದು ಸದನದಲ್ಲಿ ಮಾತನಾಡಿದ ಸಿಎಂ, ನಾನು ಸ್ವಪ್ರೇರಣೆಯಿಂದ ವಿಶ್ವಾಸ ಮತ ಯಾಚಿಸುವ ನಿರ್ಧಾರಕ್ಕೆ ಬಂದಿದ್ದೇನೆ. ಅದಕ್ಕೆ ಸಮಯ ನಿಗದಿ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ ಅಂತ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಇಂದಿನ ಅಧಿವೇಶನ ಸಂತಾಪ ಸೂಚನೆಗೆ ಸೀಮಿತವಾಗಿದೆ. ಈ ಸಂದರ್ಭದಲ್ಲಿ ನನ್ನದೊಂದು ಮನವಿ ಸಲ್ಲಿಸುತ್ತಿದ್ದೇನೆ. ರಾಜ್ಯ ರಾಜಕೀಯ ಹಲವು ಗೊಂದಲಗಳು ಸೃಷ್ಟಿಯಾಗಿದೆ. ಕೆಲ ಶಾಸಕರ ನಿರ್ಧಾರವೇ ಈ ಗೊಂದಲಕ್ಕೆ ಕಾರಣವಾಗಿದೆ. ನಾನು ಮುಖ್ಯಮಂತ್ರಿಯಾಗಿ ಶಾಶ್ವತವಾಗಿ ಅಧಿಕಾರದಲ್ಲಿರಲು ಬಂದಿಲ್ಲ. ರಾಜಕೀಯವಾಗಿ ಎಲ್ಲವನ್ನು ಎದುರಿಸಲು ತಯಾರಿದ್ದೇನೆ ಎಂದು ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿ ಸ್ವೀಕರ್ ಬಳಿ ಮನವಿ ಸಲ್ಲಿಸಿದ್ದಾರೆ.
ಸದನದಲ್ಲಿ ಎಲ್ಲರ ಬೆಂಬಲವಿದ್ದರೆ ಮಾತ್ರ ಸರ್ಕಾರ ನಡೆಸಲು ಸಹಾಯಕಾರಿಯಾಗುತ್ತದೆ. ಹೀಗಾಗಿ ನಾನು ವಿಶ್ವಾಸ ಮತ ಯಾಚನೆ ಮಾಡಲು ನಿರ್ಧರಿಸಿದ್ದೇನೆ ಎಂದು ಕುಮಾರಸ್ವಾಮಿ ಸದನಲ್ಲಿ ಹೇಳಿದ್ದಾರೆ.