ಬೆಂಗಳೂರು, ಜು12(Daijiworld News/SS): ನಾನು ಸಂವಿಧಾನ, ಕಾನೂನಿಗೆ ಅಪಚಾರವೆಸಗುವುದಿಲ್ಲ. ಜನರ ನೋವಿಗೆ ಗೌರವ ಕೊಡುವುದು ನನ್ನ ಆದ್ಯ ಕರ್ತವ್ಯ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಹೇಳಿದ ರೀತಿ ನೃತ್ಯ ಮಾಡಲು ನಾನು ನೃತ್ಯಗಾರನೂ ಅಲ್ಲ. ನಾನು ಸಂವಿಧಾನದಡಿ ನೇಮಕಗೊಂಡ ಪ್ರತಿನಿಧಿ. ಸಂವಿಧಾನ ಮಾತ್ರ ನನಗೆ ಮುಖ್ಯ. ನಾನು ಸಂವಿಧಾನ, ಕಾನೂನಿಗೆ ಅಪಚಾರವೆಸಗುವುದಿಲ್ಲ. ಜನರ ನೋವಿಗೆ ಗೌರವ ಕೊಡುವುದು ನನ್ನ ಆದ್ಯ ಕರ್ತವ್ಯ. ಅದರಿಂದ ನಾನು ವಿಮುಖನಾಗುವುದಿಲ್ಲ ಎಂದು ಹೇಳಿದ್ದಾರೆ.
ಸಂವಿಧಾನದಲ್ಲಿ ಹೇಳಿರುವ ನಿಯಮಗಳಿಗೆ ನಾನು ಅಪಚಾರ ಮಾಡುವುದಿಲ್ಲ. ಸಂವಿಧಾನದ ಮೇಲೆ ಅತ್ಯಾಚಾರ ಮಾಡುವುದಿಲ್ಲ. ಯಾರನ್ನಾದರೂ ಖುಷಿಪಡಿಸಲು ಅಥವಾ ಅಸಂತೋಷಪಡಿಸುವುದಕ್ಕೆ ನಾನು ಸಿದ್ಧನಿಲ್ಲ ಎಂದು ತಿಳಿಸಿದ್ದಾರೆ.
ಶಾಸಕರು ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸದ ಕಾರಣ ನಿನ್ನೆ ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಅವರಿಗೆ ವಿವರಣೆ ನೀಡುವಂತೆ ಕ್ರಮಸಂಖ್ಯೆ ಪ್ರಕಾರ ದಿನಾಂಕ ಮತ್ತು ಸಮಯ ನೀಡಲಾಗಿದೆ. ಸುಪ್ರೀಂಕೋರ್ಟ್ ಯಾವ ತೀರ್ಪು ನೀಡುತ್ತದೆ ನೋಡೋಣ. ಅದರ ತೀರ್ಪನ್ನು ಪಾಲಿಸೋಣ. ತಪ್ಪು ತೀರ್ಪು ನೀಡಿದರೆ, ಅದರ ಬಗ್ಗೆ ವಿವರಣೆ ಕೇಳೋಣ. ದೇಶದಲ್ಲಿ ಒಂದು ಸುಪ್ರೀಂಕೋರ್ಟ್ ಇರಬೇಕು. ಜೊತೆಗೆ ದೇಶ ಉಳಿಯಬೇಕು, ಶಾಸಕಾಂಗ, ನ್ಯಾಯಾಂಗ ಕೂಡ ಉಳಿಯಬೇಕು ಎಂದು ಹೇಳಿದರು.
ಕೈಮುಗಿಯುವ ಸೋಗಿನಲ್ಲಿ ಗಾಂಧೀಜಿಯನ್ನು ಕೊಂದ ದೇಶವಿದು. ಗಾಂಧಿಯನ್ನು ಕೊಂದರೂ ಅವರ ತತ್ವವನ್ನು ಕೊಲ್ಲಲು ಯಾರಿಂದಲೂ ಸಾಧ್ಯವಾಗಿಲ್ಲ. ನಾನು ಗಾಂಧಿ ತತ್ವದಡಿ ಬದುಕುತ್ತಿರುವ ವ್ಯಕ್ತಿ. ನನ್ನ ವಿರುದ್ಧವೂ ಬಹಳ ದಿನಗಳಿಂದ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.