ನವದೆಹಲಿ, ಜು 12 (DaijiworldNews/SM): ಕರ್ನಾಟಕದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕಂಡು ಬಿಜೆಪಿಗೆ ಹೊಟ್ಟೆಕಿಚ್ಚು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಸರ್ಕಾರವನ್ನು ಪತನ ಮಾಡುವ ಉದ್ದೇಶಕ್ಕಾಗಿ ಬಿಜೆಪಿ ಹಣವನ್ನು ಉಪಯೋಗಿಸುತ್ತಿದೆ. ಆ ಮೂಲಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಪ್ರಸ್ತುತ ಬಿಜೆಪಿಯೇತರ ಸರಕಾರವನ್ನು ನೋಡಲು ಬಿಜೆಪಿ ನಾಯಕರಿಂದ ಆಗುತ್ತಿಲ್ಲ. ಇದೇ ಕಾರಣಕ್ಕಾಗಿ ಆಡಳಿತದಲ್ಲಿರುವ ಸರ್ಕಾರವನ್ನು ಉರುಳಿಸುವುದಕ್ಕೆ ಬಿಜೆಪಿಯ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹಣ ಅಧಿಕಾರ ಬಳಿಸಿ ಬಿಜೆಪಿ ಪಕ್ಷದ ನಾಯಕರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕಡೆಗಳಲ್ಲೂ ಇದೇ ರೀತಿ ಮಾಡಲಾಗುತ್ತಿದೆ. ಈಶಾನ್ಯ ರಾಜ್ಯಗಳಲ್ಲೂ ಇಂತಹ ಹೊಳಸು ರಾಜಕೀಯ ಕಂಡಿದ್ದೇವೆ ಎಂದು ಆರೋಪಿಸಿದರು.
ಈ ಹಿಂದೆ ಮೋದಿ ಸರಕಾರ ನೋಟ್ ಅಪನಗದೀಕರಣಗೊಳಿಸಿದ ಸಂದರ್ಭದಲ್ಲಿ ಸಾಕಷ್ಟು ಹಣ ಸಂಗ್ರಹಿಸಿದೆ. ಇದರ ಕುರಿತಂತೆ ಯಾವುದೇ ಲೆಕ್ಕ ನೀಡಿಲ್ಲ ಅದೇ ಹಣವನ್ನು ಬಳಸಿಕೊಂಡು ಇದೀಗ ಶಾಸಕರ ಖರೀದಿಯಲ್ಲಿ ಬಿಜೆಪಿ ತೊಡಗಿಕೊಂಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಜನಸಾಮಾನ್ಯರು ಮಾರುಕಟ್ಟೆಯಿಂದ ಸಾಮಾಗ್ರಿಗಳು ಖರೀದಿಸಿದಂತೆ ಬಿಜೆಪಿ ಪಕ್ಷ ಶಾಸಕರ ಖರೀದಿಯಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿದ್ದಾರೆ.