ಚೆನ್ನೈ, ಜು 11 (DaijiworldNews/SM): ಸಾಮಾನ್ಯವಾಗಿ ಜೈಲು ಸೇರಲು ಯಾರೂ ಕೂಡ ಬಯಸುವುದಿಲ್ಲ. ಒಂದೊಮ್ಮೆ ಯಾವುದೋ ಪ್ರಕರಣದಲ್ಲಿ ಜೈಲು ಸೇರಿದ್ರೆ, ಬೇಲ್ ಯಾವಾಗ ಸಿಗುತ್ತೆ ಅಂತಾ ಕಾಯ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಬೇಲ್ ಮೂಲಕ ಹೊರ ಬಂದ ಬಳಿಕ ಮತ್ತೆ ಜೈಲು ಸೇರಲು ಇಚ್ಛಿಸಿದ್ದು ಅದಕ್ಕಾಗಿ ಬೈಕ್ ವೊಂದನ್ನು ಕಳ್ಳತ ಮಾಡಿದ್ದಲ್ಲದೆ, ತಾನೇ ಕಳ್ಳ, ತನ್ನನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ಅಲ್ಲೇ ಇದ್ದಂತಹ ಸಿಸಿ ಕ್ಯಾಮಾರಾಕ್ಕೆ ಫೋಸ್ ಬೇರೆ ಕೊಟ್ಟಿದ್ದಾನೆ.
ಈ ವಿಚಾರ ಆಶ್ಚರ್ಯಕರವಾಗಿದ್ದರೂ ಕೂಡ ನಂಬಲೇ ಬೇಕಾದ ನೈಜ ಘಟನೆ. ಜ್ಞಾನಪ್ರಕಾಸಂ ಎಂಬ ವ್ಯಕ್ತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಝಲ್ ಜೈಲು ಪಾಲಾಗಿದ್ದ. ಸರಿ ಸುಮಾರು ಮೂರು ತಿಂಗಳು ಜೈಲೂಟವನ್ನುಂಡಿದ್ದ. ಜೂನ್ ೨೯ರಂದು ಜಾಮೀನು ಪಡೆದು ಜೈಲ್ ನಿಂದ ಹೊರ ಬಂದಿದ್ದ. ಆದರೆ, ಆತನಿಗೆ ಮತ್ತೆ ಜೈಲೂಟದ ನೆನಪಾಗಿತ್ತು. ಜೈಲು ಸೇರಬೇಕೆಂಬ ಬಯಕೆ ಉಂಟಾಗಿತ್ತು. ಅದಕ್ಕೊಂದು ಸಂದರ್ಭಕ್ಕಾಗಿ ಆತ ಕಾಯುತ್ತಿದ್ದ. ಅಲ್ಲದೆ ಇದೇ ಕಾರಣಕ್ಕಾಗಿ ಒಂದು ಒಳ್ಳೆಯ ಉಪಾಯ ಮಾಡಿದ ಜ್ಞಾನಪ್ರಕಾಸಂ ಮತ್ತೊಂದು ಕಳ್ಳತನ ಪ್ರಕರಣಕ್ಕೆ ಕೈ ಹಾಕಿದ್ದ.
ಜೈಲೂಟಕ್ಕಾಗಿ ಮತ್ತೆ ಕಳ್ಳತನ:
ಪಿ. ಅಶೋಕನ್ ಸಹಾಯಕ ಆಯುಕ್ತರು ಹೇಳುವಂತೆ, ಜ್ಞಾನಪ್ರಕಾಸಂ ಜೈಲೂಟಕ್ಕಾಗಿ ಮತ್ತೆ ಕಳ್ಳತನ ಕೃತ್ಯಕ್ಕೆ ಕೈಹಾಕಿದ್ದಾನೆ. ಇದಕ್ಕೂ ಮುಖ್ಯವಾಗಿ ಆತನಿಗೆ ತನ್ನ ಮನೆಯಲ್ಲಿ ಖುಷಿ ಸಿಗುತ್ತಿರಲಿಲ್ಲ. ಆತನ ಕುಟುಂಬ ಸದಸ್ಯರು ಆತನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಈ ಕಾರಣದಿಂದಾಗಿ ಆತ ಮತ್ತೆ ಮನೆಯತ್ತ ಹೆಜ್ಜೆ ಹಾಕಲು ಹಿಂದೇಟು ಹಾಕುತ್ತಿದ್ದ ಎಂದು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಮತ್ತೆ ಬಂಧಿಖಾನೆಯತ್ತ ಮುಖಮಾಡಿದ್ದ ಎಂದು ಆತನೇ ಪೊಲೀಸರಿಗೆ ಮಾಹಿತಿ ನೀಡಿದ್ದ ಎಂದು ತಿಳಿಸಿದ್ದಾರೆ.
ಅಲ್ಲದೆ, ಆತ ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಜೈಲಿನಲ್ಲಿರುವ ಸಮಯದಲ್ಲಿ ಖುಷಿಯಾಗಿರುತ್ತಿದ್ದ. ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ ಭೋಜನ, ರಾತ್ರಿಯ ಊಟ ಹೀಗೆ ಕಾಲ ಕಾಲಕ್ಕೆ ಜೈಲಿನಲ್ಲಿ ಊಟೋಪಚಾರವೂ ಸಿಗುತ್ತಿತ್ತು. ಅಲ್ಲದೆ, ಜೈಲಿನಲ್ಲಿ ಅವರನ್ನು ಯಾರೂ ಕೂಡ ಆಲಸಿ ಎಂದು ಸಂಬೋಧಿಸುತ್ತಿರಲಿಲ್ಲ. ಇದನ್ನೂ ಮೀರಿ ಅಲ್ಲಿ ಆತ ಹಲವು ಮಂದಿಯ ಸ್ನೇಹ ಸಂಪಾದಿಸಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
‘ತನಗೆ ಸಂಸಾರದಲ್ಲಿ ಜೀವನ ನಡೆಸಲು ಕಷ್ಟವಾಗುತ್ತಿದೆ. ನನ್ನ ಪತ್ನಿ ಹಾಗೂ ಮಕ್ಕಳು ಪ್ರತಿನಿತ್ಯ ನನ್ನನ್ನು ನಿಂದಿಸುತ್ತಿದ್ದಾರೆ’ ಎಂದು ಆತನನ್ನು ಎರಡನೇ ಬಾರಿ ಪೊಲೀಸರು ಬಂಧಿಸಿದ್ದ ಸಂದರ್ಭ ಪೊಲೀಸರಿಗೆ ತಿಳಿಸಿದ್ದಾನೆ.
ಬೈಕ್ ಕದ್ದು ಫೋಸ್ ಕೊಟ್ಟ:
ಮನೆಯಲ್ಲಿ ಪತ್ನಿ ಹಾಗೂ ಮಕ್ಕಳ ನಿಂದನೆಯಿಂದ ನೊಂದುಕೊಂಡಿದ್ದ ಜ್ಞಾನಪ್ರಕಾಸಂ ಮನೆ ತೊರೆದಿದ್ದ. ಆದರೆ, ಜೀವನ ನಿರ್ವಹಣೆಗೆ ಯಾವುದೇ ಹಾದಿ ಆತನ ಕೈಯಲ್ಲಿರಲಿಲ್ಲ. ಬದಲಿಗೆ ಜೈಲೂಟವನ್ನೇ ತಿನ್ನೋ ಆಸೆಯನ್ನು ಇಟ್ಟುಕೊಂಡು ಮನೆಯಿಂದ ಹೊರ ಬಂದಿದ್ದ. ಪಶ್ಚಿಮ ತಾಂಬರಂನ ಕೈಲಾಸಪುರಂ ಎಂಬಲ್ಲಿ ಪಾರ್ಕ್ ಮಾಡಲಾಗಿದ್ದ ಬೈಕ್ ಒಂದನ್ನು ಆತ ದರೋಡೆ ಮಾಡಿದ್ದ. ಆದರೆ, ಇಷ್ಟಕ್ಕೆ ಸುಮ್ಮನಾಗದ ಆತ, ಅಲ್ಲೇ ಪಕ್ಕದಲ್ಲಿದ್ದ ಸಿಸಿ ಕ್ಯಾಮಾರಕ್ಕೆ ಫೋಸ್ ಕೊಟ್ಟಿದ್ದ. ತಾನೇ ಬೈಕ್ ಕಳವು ಮಾಡಿದ್ದು, ಶೀಘ್ರ ಪತ್ತೆ ಹಚ್ಚಿ ಬಂಧಿಸಿ ಮತ್ತೆ ತನ್ನನ್ನು ಜೈಲು ಸೇರಿಸಿ ಎಂದು ಖುಷಿಯಿಂದ ಬೀಗಿದ್ದ.
ಕಳವು ಮಾಡಿದ ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗುತ್ತಿದ್ದಂತಹ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳಿಂದ ಆತ ಪೆಟ್ರೋಲ್ ಕಳವು ಮಾಡುತ್ತಿದ್ದ. ಪ್ರತಿನಿತ್ಯ ಇದೇ ರೀತಿ ಮಾಡುತ್ತಿದ್ದ ಈತ ಒಂದು ಬಾರಿ ತಾಂಬರಂ ಬಳಿ ಬೈಕ್ ನಿಂದ ಪೆಟ್ರೋಲ್ ಕದಿಯುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ತಗಲಾಕೊಂಡಿದ್ದ. ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಲಾಗಿದೆ. ಪೊಲೀಸರು ವಿಚಾರಣೆ ನಡೆಸಿದಾಗ, ತಾನು ಪೆಟ್ರೋಲ್ ಮಾತ್ರವೇ ಕದ್ದೀರೋದಲ್ಲ ಬದಲಿಗೆ ಬೈಕನ್ನೂ ಕೂಡ ಕದ್ದಿರೋದಾಗಿ ತಿಳಿಸುತ್ತಾನೆ.
ಆತ ಕದ್ದಿರುವ ಬೈಕ್ ವಿಘ್ನೇಶ್ವರನ್ ಎಂಬವರಿಗೆ ಸೇರಿದ್ದು, ಅವರು ಈ ಹಿಂದೆಯೇ ಠಾಣೆಗೆ ದೂರು ನೀಡಿದ್ದರು. ಇದೀಗ ರೋಗಿ ಬಯಸಿದ್ದೂ ಹಾಲು, ವೈದರು ಹೇಳಿದ್ದು ಹಾಲು ಎಂಬಂತೆ ಆತ ಬಯಸಿದಂತೆ ಮತ್ತೆ ಸೆರೆವಾಸಕ್ಕೆ ಒಳಗಾಗಿದ್ದಾನೆ.