ಬೆಂಗಳೂರು, ಜು13(Daijiworld News/SS): ಕೆಟ್ಟ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಸಿಎಂ ಸ್ಥಾನವನ್ನು ನಾನು ಬಯಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿಲ್ಲ. ಹಾಗಿದ್ದಾಗ ನಾನು ಸಿಎಂ ಆಗಲು ಬಯಸುವುದಿಲ್ಲ. ಬಿಜೆಪಿಯಲ್ಲೂ 'ಬ್ಲಾಕ್ ಶೀಪ್ಸ್'ಗಳಿದ್ದಾರೆ. ಹಾಗಾಗಿಯೇ ಬಿಜೆಪಿಯು ತನ್ನ ಶಾಸಕರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವಾಸ ಇರುವುದಕ್ಕೇ ವಿಶ್ವಾಸಮತ ಯಾಚನೆಗೆ ಕುಮಾರಸ್ವಾಮಿ ಕೇಳಿದ್ದಾರೆ. ಕಾದು ನೋಡಿ.. ಏನಾಗುತ್ತದೆ ಅಂತಾ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೇ ಹೆಚ್ಚು ಮಂದಿ ರಾಜೀನಾಮೆ ನೀಡಿರುವ ಕಾರಣ ಸಿದ್ದರಾಮಯ್ಯ ಅವರೇ ಈ ರಾಜೀನಾಮೆಗಳನ್ನು ಕೊಡಿಸಿದ್ದಾರೆ ಎಂಬ ಅನುಮಾನ ದಟ್ಟವಾಗಿ ಹರಿದಾಡಿತ್ತು. ಅತೃಪ್ತ ಶಾಸಕರ ರಾಜೀನಾಮೆ ಪರ್ವ ಶುರುವಾದಾಗಿನಿಂದಲೂ ಈ ರಾಜಕೀಯ ನಾಟಕಕ್ಕೆ ಸಿದ್ದರಾಮಯ್ಯ ಅವರದ್ದೇ ನಿರ್ದೇಶಕ ಎಂಬ ಮಾತು ಕೇಳಿ ಬಂದಿದ್ದವು. ಅದಕ್ಕೆ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.