ನವದೆಹಲಿ, ಜು13(Daijiworld News/SS): ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಉಡಾವಣೆಗೆ ದಿನಗಣನೆ ಆರಂಭವಾಗಿದೆ. ಚಂದ್ರಯಾನ 2 ಯೋಜನೆಯ ಸಾಧನ ಸಲಕರಣೆಗಳನ್ನು ಹೊತ್ತು ಭೂಸ್ಥಿರ ಉಡಾವಣೆ ವಾಹಕವು ಚಂದ್ರನತ್ತ ನೆಗೆಯಲಿದೆ. ಲ್ಯಾಂಡರ್ ವಿಕ್ರಂ ಸುರಕ್ಷಿತವಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಸುವುದು ಯೋಜನೆಯ ಪ್ರಮುಖ ಸವಾಲಾಗಿದೆ.
ಇದೇ ತಿಂಗಳ 15ರಂದು ಚಂದ್ರಯಾನ-2 ಉಡ್ಡಯನವಾಗಲಿದ್ದು, ಅದು ಯಶಸ್ವಿಯಾದರೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶ್ವದಲ್ಲಿ ಅಂತರಿಕ್ಷ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ದೇಶಗಳ ಸಾಲಿನಲ್ಲಿ ಭಾರತ ನಿಲ್ಲಲಿದೆ.
ಇಸ್ರೋದ ವಿಜ್ಞಾನಿಗಳು ಇದಕ್ಕಾಗಿಯೇ ಹೆಚ್ಚಿನ ಸಮಯ ವ್ಯಯಿಸಿದ್ದಾರೆ. ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡಿಂಗ್ಗೆ ಸೂಕ್ತ ಸ್ಥಳದ ಹುಡುಕಾಟಕ್ಕಾಗಿ 3,500 ಫೋಟೋಗಳನ್ನು ಪರಿಶೀಲಿಸಿದ್ದಾರೆ. ನಾಸಾದ ಲೂನಾರ್ ರಿಕನೇಸಾನ್ಸ್ ಆರ್ಬಿಟರ್, ಜಪಾನ್ನ ಕಗುವಾ ಲೂನಾರ್ ಆರ್ಬಿಟರ್ ಸಂಗ್ರಹಿಸಿರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದರ ಜತೆಗೆ ಚಂದ್ರಯಾನ-1 ಸಂಗ್ರಹಿಸಿರುವ ಫೋಟೋಗಳನ್ನೂ ಅಧ್ಯಯನ ನಡೆಸಲಾಗಿದೆ. ಚಂದ್ರನಲ್ಲಿ ಭಾರಿಗಾತ್ರದ ಕಲ್ಲುಗಳಿವೆ. 32 ಸೆಂ.ಮೀ ದೊಡ್ಡ ಕಲ್ಲು ಕೂಡ ಸುರಕ್ಷಿತ ಲ್ಯಾಂಡಿಂಗ್ಗೆ ಅಡ್ಡಿಯಾಗಲಿದೆ ಎನ್ನಲಾಗಿದೆ.
ಭಾರತವೂ ದಕ್ಷಿಣ ಧ್ರುವದಲ್ಲೇ ವಿಕ್ರಂನ್ನು ಇಳಿಸಲು ಬಯಸಿದ್ದು, ಇಲ್ಲಿ ಆಳ ಕುಳಿಗಳು ಮತ್ತು ದೊಡ್ಡ ದೊಡ್ಡ ಕಲ್ಲುಗಳ ಪ್ರಮಾಣ ಕಡಿಮೆ ಇದೆ. ಸುರಕ್ಷಿತವಾಗಿ ಇಳಿಯಲು 12 ಡಿಗ್ರಿಗಿಂತಲೂ ಕಡಿಮೆ ತಗ್ಗು ಪ್ರದೇಶದ ಅಗತ್ಯವಿದೆ. ದಕ್ಷಿಣ ಧ್ರುವದಲ್ಲಿ ಮೇಲ್ಮೈ ಸಮತಟ್ಟಾಗಿರುವುದು ಲ್ಯಾಂಡಿಂಗ್ಗೆ ಅನುಕೂಲಕರವಾಗಿದೆ. ಇದರ ಹೆಚ್ಚಿನ ಭಾಗ ನೆರಳಿನಿಂದ ಆವೃತ್ತವಾಗಿರುವುದರಿಂದ, ಈ ಭಾಗದಲ್ಲಿ ನೀರಿನ ಅಂಶಗಳು ಕಂಡುಬರುವ ಸಾಧ್ಯತೆ ದಟ್ಟವಾಗಿದೆ. ಶೀತಲ ವಾತಾವರಣದಿಂದ ಸೌರಮಂಡಲದ ಉಗಮದ ಬಗೆಗಿನ ಅಧ್ಯಯನಕ್ಕೂ ಅನುಕೂಲವಾಗಲಿದೆಎಂದು ಮೂಲಗಳು ತಿಳಿಸಿದೆ.
2018ರಲ್ಲಿ ಇಸ್ರೋ ನೀಡಿದ್ದ ಮಾಹಿತಿಯಂತೆ ಅಟ್ಕೆನ್ ಬೇಸಿನ್ನಿಂದ ಉತ್ತರಕ್ಕೆ 350 ಕಿಮೀ ದೂರದಲ್ಲಿ ವಿಕ್ರಂ ಲ್ಯಾಂಡಿಂಗ್ ಆಗಲಿದೆ. ಇನ್ನೊಂದು ಸ್ಥಳವನ್ನೂ ಗುರುತಿಸಲಾಗಿದ್ದು, ಇದು ಇದರ ಪಕ್ಕದಲ್ಲೇ ಇದೆ ಎನ್ನಲಾಗಿದೆ.
ಚಂದ್ರನಲ್ಲಿಗೆ ಚಿಮ್ಮುವ ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್, 'ವಿಕ್ರಮ್' ಲ್ಯಾಂಡರ್ ಹಾಗೂ 'ಪ್ರಗ್ಯಾನ್' ರೋವರ್ಗಳನ್ನು ಹೊತ್ತೊಯ್ಯಲಿದೆ. 27 ಕಿಲೋ ತೂಕದ ಆರು ಗಾಲಿಗಳನ್ನು ಹೊಂದಿರುವ ಈ ರೋವರ್ 14 ದಿನಗಳವರೆಗೆ ಸುಮಾರು ಅರ್ಧ ಕಿ.ಮೀ. ಚಂದ್ರನ ಮೇಲ್ಮೈ ಮೇಲೆ ಸಂಚರಿಸಲಿದೆ. ಸೂಕ್ಷ್ಮ ಕ್ಯಾಮೆರಾಗಳನ್ನು ಹೊಂದಿರುವ ರೋವರ್ನಲ್ಲಿ ಚಂದ್ರನಲ್ಲಿನ ಮಣ್ಣಿನ ಪರೀಕ್ಷೆ ನಡೆಸುವ ಹಲವು ಸಾಧನಗಳು ಕೂಡ ಇವೆ ಎಂದು ಇಸ್ರೊ ಮುಖ್ಯಸ್ಥ ಡಾ. ಕೆ.ಶಿವನ್ ಹೇಳಿದ್ದಾರೆ.