ಬೆಂಗಳೂರು, ಜು 13 (Daijiworld News/MSP): ಮೈತ್ರಿ ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತು ರಾಜೀನಾಮೆ ನೀಡಿದ್ದ ಸಚಿವ ಎಂಟಿಬಿ ನಾಗರಾಜ್ ಅವರ ಮನವೊಲಿಕೆಗೆ ಮೈತ್ರಿ ಪಕ್ಷದ ಎಲ್ಲಾ ನಾಯಕರು ಪ್ರಯತ್ನಿಸಿದ್ದು, ಹೀಗಾಗಿ ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಬೆಂಗಳೂರಿನ ಹೂಡಿಯಲ್ಲಿರುವ ನಾಗರಾಜ್ ಅವರ ಮನೆಗೆ ಶನಿವಾರ ಮುಂಜಾನೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್ ದಿಢೀರ್ ಎಂಬಂತೆ ಎಂಟಿಬಿ ನಾಗರಾಜ್ ಮನೆಗೆ ಭೇಟಿ ನೀಡಿ ಸುಮಾರು ಆರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು.
ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಎಂಟಿಬಿ, ರಾಜಿನಾಮೆ ವಾಪಸ್ ಪಡೆಯಲು ನಾನು ಕಾಲಾವಕಾಶ ಕೇಳಿದ್ದೇನೆ. ಕಾಂಗ್ರೆಸ್ ಮುಖಂಡರು ನನ್ನ ಮನವೊಲಿಕೆಗೆ ಯತ್ನಿಸಿದ್ದಾರೆ. ಡಾ.ಸುಧಾಕರ್ ಮತ್ತು ನಾನು ಒಂದೇ ದಿನ ರಾಜೀನಾಮೆ ನೀಡಿದ್ದೇವು, ಹೀಗಾಗಿ ಈ ಬಗ್ಗೆ ನಾನು ಶಾಸಕ ಸುಧಾಕರ್ ಅವರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.