ಬೆಂಗಳೂರು, ಜು13(Daijiworld News/SS): ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಹುಮತವನ್ನು ಕಳೆದುಕೊಂಡಿದ್ದು ಸರ್ಕಾರದ ಪತನ ನಿಶ್ಚಿತವಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಸಿಎಂ ಕುಮಾರಸ್ವಾಮಿ ವಿಶ್ವಾಸಮತಯಾಚನೆಗೆ ಮುಂದಾಗಿದ್ದು ಜು.15 (ಸೋಮವಾರದಂದೇ) ಸದನದಲ್ಲಿ ಈ ಪ್ರಕ್ರಿಯೆ ನಡೆಸಬೇಕು. 16 ಶಾಸಕರು ರಾಜೀನಾಮೆ ನೀಡಿದ್ದು, ಸೋಮವಾರದಂದೇ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಬೇಕು. ಮುಖ್ಯಮಂತ್ರಿಗಳು ಬದ್ಧತೆಯನ್ನು ಪೂರೈಸಬೇಕೆಂದು ಸೋಮವಾರ ನಡೆಯಲಿರುವ ವ್ಯವಹಾರ ಸಲಹಾ ಸಮಿತಿಯಲ್ಲಿ ಒತ್ತಾಯಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.
ಮುಂಬೈನಲ್ಲಿರುವ 10 ಮಂದಿ ಅತೃಪ್ತರ ಜೊತೆಗೆ ಹೊಸದಾಗಿ ಐವರು ಸುಪ್ರೀಂಕೋರ್ಟ್ಗೆ ಮನವಿ ಮಾಡಿಕೊಂಡಿದ್ದಾರೆ. ಇವರ ಮನವಿಗಳನ್ನು ನ್ಯಾಯಾಲಯ ಸ್ವೀಕರಿಸಿದೆ. ಈ ಹಂತದಲ್ಲಿ ಯಾರೂ ಹಿಂದೆ ಸರಿಯಲು ಆಗುವುದಿಲ್ಲ. ಬೆಳಿಗ್ಗೆಯಿಂದ ಶಿವಕುಮಾರ್ ಮತ್ತು ಇತರರ ಒತ್ತಡದಿಂದ ಎಂಟಿಬಿ ನಾಗರಾಜ್ ಏನೋ ಹೇಳಿರಬಹುದು. ಆದರೆ ಕೋರ್ಟ್ಗೆ ಮನವಿ ಸಲ್ಲಿಸಿರುವವರಲ್ಲಿ ಅವರೂ ಸೇರಿದ್ದಾರೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸರ್ಕಾರದ ಬಗ್ಗೆ ಜನರಿಗೆ ಬೇಸರ ಬಂದಿದೆ. ರಾಜ್ಯದಲ್ಲಿ ಎಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನರು ಈ ಸರ್ಕಾರ ಹೋಗಬೇಕು ಅಂತ ಹೇಳ್ತಿದ್ದಾರೆ ಎಂದು ಹೇಳಿದರು.