ಬೆಳಗಾವಿ, ಜು13(Daijiworld News/SS): ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದು ಸಫಲವಾಗುವುದಿಲ್ಲ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಉರುಳಿಸಲು ಬಿಜೆಪಿ ಪದೇ ಪದೇ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದು ಸಫಲವಾಗುವುದಿಲ್ಲ. ನಾವು ರಿವರ್ಸ್ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ. ನಮ್ಮವರು ವಾಪಸ್ ಬಂದರೂ ಸರ್ಕಾರ ಉಳಿಯುತ್ತೆ. ಈಗಾಗಲೇ ನಾಲ್ಕು ಜನ ಶಾಸಕರು ಬೆಂಗಳೂರಿನಲ್ಲೇ ಇದ್ದಾರೆ. ಮುಂಬೈನಲ್ಲಿರುವ ಇಬ್ಬರು ಶಾಸಕರು ಬಂದ್ರೆ ಸರ್ಕಾರ ಉಳಿಯುತ್ತೆ ಎಂದು ಹೇಳಿದರು.
ನಮಗೆ ಬಿಜೆಪಿಯವರಿಗೆ ಎರಡು ಸಂಖ್ಯೆ ಮಾತ್ರ ವ್ಯತ್ಯಾಸವಿದೆ. ನಮಗೆ 105 ಇದ್ರೆ ಅವರಿಗೆ 107 ಇದೆ. ಪಕ್ಷೇತರರು ಸ್ವತಂತ್ರರಿದ್ದಾರೆ. ಈಗ ಅಲ್ಲಿದ್ದಾರೆ ನಾಳೆ ನಮ್ಮತ್ರ ಬರಬಹುದು. ಸರ್ಕಾರಕ್ಕೆ ತೊಂದರೆ ಇಲ್ಲ. ಉಳಿಸಿಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಅಷ್ಟೇ ಅಲ್ಲ, ಪ್ರಧಾನ ಮಂತ್ರಿ ಮಾಡುತ್ತೇವೆ ಅಂದ್ರು ಶಾಸಕ, ಸಹೋದರ ರಮೇಶ ಜಾರಕಿಹೊಳಿ ವಾಪಸ್ ಬರುವುದಿಲ್ಲ. ಗೋಕಾಕದಲ್ಲಿ ಉಪಚುನಾವಣೆ ನಡೆದರೆ, ರಮೇಶ ಅವರೇ ನಿಲ್ಲಲಿ ಅಥವಾ ಯಾರನ್ನಾದರೂ ನಿಲ್ಲಿಸಲಿ. ಕಾಂಗ್ರೆಸ್ನಿಂದ ಲಖನ್ ಜಾರಕಿಹೊಳಿ ಸ್ಪರ್ಧಿಸುವುದು ಖಚಿತ ಎಂದು ಹೇಳಿದರು.
ರಾಜೀನಾಮೆ ಕೊಟ್ಟು ಹೋಗುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹೇಳುವ ನೈತಿಕತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಲ್ಲ. 10 ವರ್ಷಗಳ ಹಿಂದೆ ಅವರ ಆಡಳಿತದಲ್ಲಿಯೇ ಇಂತಹದ್ದೆ ಸ್ಥಿತಿ ನಿರ್ಮಾಣವಾದಾಗ, ಅಂದಿನ ಸ್ಪೀಕರ್ ಬಂಡಾಯವೆದ್ದ ಶಾಸಕರನ್ನು ಅನರ್ಹಗೊಳಿಸಿ, ಸರ್ಕಾರವನ್ನು ಉಳಿಸಿದ್ದರು ಎಂದು ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 16 ಜನ ಶಾಸಕರು ಬಂಡಾಯವೆದ್ದಿದ್ದರು. ಅಂದು ರಾತ್ರೋರಾತ್ರಿ ನೋಟಿಸ್ಗಳನ್ನು ಶಾಸಕರ ಕೊಠಡಿಗಳಿಗೆ ಅಂಟಿಸಿ, ಅನರ್ಹಗೊಳಿಸಲಾಗಿತ್ತು. ಆದರೆ, ನಮ್ಮ ಸ್ಪೀಕರ್ ಹಾಗಲ್ಲ. ಕ್ರಮಬದ್ಧವಾಗಿ ಕಾಲಾವಕಾಶ ನೀಡುತ್ತಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.