ಬೆಂಗಳೂರು,ಜು 14 (Daijiworld News/MSP) : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಶನಿವಾರ ತಾನೇ ರಾಜೀನಾಮೆ ಹಿಂಪಡೆಯುವುದಾಗಿ ಹೇಳಿದ್ದರು. ಆದರೆ ಅಚ್ಚರಿದಾಯಕ ಬೆಳವಣಿಗೆಯಲ್ಲಿ ಎಂ.ಟಿ. ಬಿ ಭಾನುವಾರ ಮುಂಜಾನೆ ವಿಶೇಷ ವಿಮಾನವನ್ನು ಏರಿ ಮುಂಬೈಗೆ ಹಾರಿರುವುದು ದೋಸ್ತಿ ಪಾಳವನ್ನು ದಂಗುಬಡಿಸಿದೆ. ಶಾಸಕ ಸುಧಾಕರ್ ಅವರ ಮನವೊಲಿಸುವ ನೆಪದಲ್ಲಿ ಶಾಸಕ ಎಂ.ಟಿ. ಬಿ ನಾಗರಾಜ್ ಕೂಡ ಮುಂಬೈನತ್ತ ಪ್ರಯಾಣ ಬೆಳೆಸಿರುವುದನ್ನು ಕಂಡು ಕೈ ಪಾಳಯದಲ್ಲಿ ತಳಮಳ ಸೃಷ್ಟಿಯಾಗಿದೆ.
ಬೆಂಗಳೂರಿನಿಂದ ಶಾಸಕ ಎಂಟಿಬಿ ಅವರು ವಿಶೇಷ ವಿಮಾನವನ್ನು ಏರಿ ಮುಂಬೈನತ್ತ ಪ್ರಯಾಣಿಸಿದ್ದಾರೆ. ಈ ನಡುವೆ ಸುಧಾಕರ್ ಈಗಾಗಲೇ ಮುಂಬೈ ಸೇರಿದ್ದಾರೆ ಎಂದು ಹೇಳಲಾಗುತ್ತಿದ್ದು, ಎಂಟಿಬಿ ಮತ್ತು ಸುಧಾಕರ್ ಇನ್ನು ಕೆಲವೇ ಕ್ಷಣಗಳಲ್ಲಿ ಮುಂಬೈನಲ್ಲಿರುವ ಅತೃಪ್ತರ ತಂಡವನ್ನು ಸೇರಲಿದ್ದಾರೆ. ಎಂಟಿಬಿ ಅವರು ಬಿಜೆಪಿ ನಾಯಕ, ಮಾಜಿ ಡಿಸಿಎಂ ಆರ್ ಅಶೋಕ್ ಅವರ ಜೊತೆ ವಿಶೇಷ ವಿಮಾನ ಏರಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಮನವೊಲಿಸಲು ಶನಿವಾರ ದಿನವಿಡೀ ಕಾಂಗ್ರೆಸ್ ಪ್ರಯತ್ನಿಸಿತ್ತು. ಆದರೆ ಎಂಟಿಬಿ ಮಾತ್ರ ಬಗ್ಗಿರಲಿಲ್ಲ. ಶಾಸಕ ಎಂಟಿಬಿ ನಾಗರಾಜ್ ಅವರ ಮನೆಗೆ ಕಾಂಗ್ರೆಸ್ನ ಘಟಾನುಘಟಿ ನಾಯಕರು ಮುಂಜಾನೆಯಿಂದ ಮನವೊಲಿಕೆಗೆ ಯತ್ನಿಸಿದ್ದರು. ಯಾರಿಗೂ ಬಗ್ಗದ ಎಂಟಿಬಿ ಕೊನೆಗೆ ಸಿದ್ದರಾಮಯ್ಯ ಮುಂದೆ ಮಂಡಿಯೂರಿದ್ದು ಭಾನುವಾರ ರಾಜಿನಾಮೆ ಹಿಂಪಡೆಯುವುದಾಗಿ ಹೇಳಿದ್ದರು. ಮಾತ್ರವಲ್ಲ ಕಾಂಗ್ರೆಸ್ ನಲ್ಲಿಯೇ ಉಳಿಯುವುದಾಗಿ ಎಂಟಿಬಿ ನಾಗರಾಜ್ ಮಾತು ಕೊಟ್ಟಿದ್ದರು ಎಂದು ವರದಿಯಾಗಿತ್ತು.
ಈ ನಡುವೆ ಮುಂಬೈಗೆ ತೆರಳಿದ ಶಾಸಕ ಎಂಟಿಬಿ ನಾಗರಾಜ್ ನಡೆ ಕಾಂಗ್ರೆಸ್ ಗೆ ಡಬಲ್ ಶಾಕ್ ನೀಡಿದಂತಾಗಿದೆ.