ತುಮಕೂರು, ಜು 14 (Daijiworld News/MSP): ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಅವರ ಅಪ್ಪ ರಾವಣ ಎಂದು ಹೆಸರಿಡಬೇಕಿತ್ತು. ಆದರೆ, ರೇವಣ್ಣ ಎಂದು ಇಟ್ಟುಬಿಟ್ಟಿದ್ದಾರೆ ಎಂದ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣಅವರು ರೇವಣ್ಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾದ್ಯಮದೊಂದಿಗೆ ಮಾತನಾಡಿ ಅವರು , ಮೈತ್ರಿ ಸರ್ಕಾರದ ಸ್ಥಿತಿ ಡೋಲಾಯಮಯವಾಗಿದ್ದು, ಸಚಿವ ರೇವಣ್ಣ ಅವರ ಕಾಟಕ್ಕೆ ಯಾವ ಅತೃಪ್ತ ಶಾಸಕರು ವಾಪಸ್ ಬರುವುದಿಲ್ಲ. ಯಾಕೆಂದರೆ ಅವರಿಗೆಲ್ಲ ರೇವಣ್ಣ ಅಷ್ಟೊಂದು ಕಾಟ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಬೀಳೋಕೆ ಸಚಿವ ರೇವಣ್ಣ ಅವರೇ ನೇರ ಕಾರಣವಾಗಿದ್ದು, ಈಗ ಸರ್ಕಾರಕ್ಕೇ ಏನು ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇವರು ಸೂಪರ್ ಸಿಎಂ ರೀತಿ ವರ್ತನೆಗೆ ಶಾಸಕರು ರಾಜೀನಾಮೆ ನೀಡಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ ಬಳಿಕ ಲಕ್ಷ್ಮಣ್ ಸವದಿ ಅವರನ್ನು ಭೇಟಿ ಕುರಿತು ಮಾತನಾಡಿದ ಅವರು, ಲಕ್ಷ್ಮಣ್ ಸವದಿ ನನ್ನನ್ನು ಬಿಜೆಪಿಗೆ, ನಾನು ಅವರನ್ನು ಕಾಂಗ್ರೆಸ್ ಗೆ ಕರೆದಿಲ್ಲ. ಅವರು ನಾನು 25 ವರ್ಷಗಳ ಸ್ನೇಹಿತರು. ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಬಂದು ನನ್ನನ್ನು ಭೇಟಿ ಮಾಡಿದ್ದಾರೆ. ಸೌಜನ್ಯಯುತ ಭೇಟಿಗೆ ಯಾವುದೇ ರಾಜಕೀಯ ಲೇಪನ ಅಗತ್ಯವಿಲ್ಲ ಎಂದರು.