ಮುಂಬೈ, ಜು 14 (Daijiworld News/SM): ನಾವು 13 ಶಾಸಕರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದೇವೆ. ಹಾಗೂ ಮುಂಬೈನಲ್ಲಿ ಜತೆಯಾಗಿದ್ದೇವೆ. ಈ ಪೈಕಿ ಯಾರೊಬ್ಬರೂ ಕೂಡ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮುಂಬೈನಲ್ಲಿರುವ ಅತೃಪ್ತ ಶಾಸಕರ ತಂಡದ ಮುಖಂಡ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮುಂಬೈನಲ್ಲಿ ಸುದ್ದಿಗೋಷ್ಟಿ ನಡೆಸಿರುವ ಅವರು, ಎಂಟಿಬಿ ನಾಗರಾಜು ಅವರು ನಮ್ಮ ಮನವೊಲಿಸಲು ಬಂದಿಲ್ಲ. ಹಾಗೂ ಅವರು ನಮ್ಮನ್ನು ಕರೆದುಕೊಂಡು ಹೋಗಲೆಂದು ಕೂಡ ಬಂದಿಲ್ಲ. ಬದಲಿಗೆ ನಮ್ಮ ಅತೃಪ್ತರ ಪಂಗಡವನ್ನು ಸೇರಲೆಂಡು ಅವರು ಬಂದಿದ್ದಾರೆ ಎಂದರು.
ಸದ್ಯ ಮುಂಬೈನಲ್ಲಿ ಉಳಿದುಕೊಂಡಿರುವ ಶಾಸಕರಲ್ಲೇ ಗುಂಪುಗಳಾಗಿವೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ ಅದು ಸತ್ಯಕ್ಕೆ ದೂರವಾದ ವಿಚಾರ ಎಂದು ಅವರು ಹೇಳಿದರು. ಮುಂಬೈನಲ್ಲಿರುವ ಎಲ್ಲಾ ಅತೃಪ್ತರು ಜತೆಯಾಗಿದ್ದೇವೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದರು.
ನಾವು ಯಾವ ಸಂಪರ್ಕದಲ್ಲೂ ಇಲ್ಲ, ಯಾರನ್ನೂ ಕೂಡ ಸಂಪರ್ಕ ಮಾಡುವ ಯತ್ನವನ್ನು ನಾವು ಮಾಡಿಲ್ಲ. ಅಲ್ಲದೆ, ನಾವು ಯಾರನ್ನೂ ಭೇಟಿ ಸಹ ಆಗುವುದಿಲ್ಲ ಎಂದಿರುವ ಅವರು, ನಮ್ಮನ್ನು ಭೇಟಿ ಆಗಲು ಬರುವವರಿಗೆ ಒಳಗೆ ಪ್ರವೇಶ ನೀಡಬೇಡಿ ಎಂದು ಹೊಟೆಲ್ ಆಡಳಿತ ಮಂಡಳಿಗೆ ತಿಳಿಸಿದ್ದೇವೆ ಎಂದು ಎಸ್.ಟಿ. ಸೋಮಶೇಖರ್ ಹೇಳಿದರು.