ಬೆಂಗಳೂರು, ಜು 14 (Daijiworld News/SM): ರಾಜ್ಯ ರಾಜಕಾರಣ ಕ್ಷಣಕ್ಷಣಕ್ಕೂ ಕುತೂಹಲದ ಕಣವಾಗುತ್ತಿದೆ. ಒಂದೆಡೆ ಕಾಂಗ್ರೆಸ್ ನ ಅತೃಪ್ತ ಶಾಸಕರು ಪಟ್ಟು ಬಿಡದೆ ರಾಜೀನಾಮೆಯನ್ನೇ ಎತ್ತಿ ಹಿಡಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ತನ್ನ ಶಾಸಕರ ಮನ ಒಲಿಸಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಇನ್ನೊಂದೆಡೆ ಬಿಜೆಪಿ ಸರಕಾರ ರಚನೆಗೆ ಬಕಪಕ್ಷಿಯಂತೆ ಕಾದು ಕುಳಿತಿದೆ.
ಇವುಗಳ ನಡುವೆ ಈ ಎಲ್ಲಾ ಗೊಂದಲಗಳು ಶುರುವಾದ ದಿನದಿಂದ ತನಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಸಿಎಂ ಮೌನವಾಗಿದ್ದು, ಕಾಂಗ್ರೆಸ್ ಮುಖಂಡರೇ ಈ ಬಿಕ್ಕಟ್ಟನ್ನು ಬಗೆಹರಿಸಲಿ ಎಂದು ಕುಳಿತಿದ್ದಾರೆ.
ಈ ನಡುವೆ ಆದಿತ್ಯವಾರದಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿದೆ. ತಾಜ್ ವಿವಾಂತದಲ್ಲಿ ಉಳಿದುಕೊಂಡಿದ್ದ ಕಾಂಗ್ರೆಸ್ ಶಾಸಕರನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಭೇಟಿಯಾಗಿ ಮಾತುಕತೆ ನಡೆಸಿದರು.
ಇನ್ನು ನಿನ್ನೆ ತಾನೇ ಕಾಂಗ್ರೆಸ್ ಪಾಳಯಕ್ಕೆ ಮರಳುವ ಸೂಚನೆ ನೀಡಿದ್ದ ಅತೃಪ್ತ ಶಾಸಕ ಎಂ.ಟಿ.ಬಿ. ನಾಗರಾಜ್ ಅವರು ಇವತ್ತು ದಿಢೀರ್ ಆಗಿ ಮುಂಬಯಿಗೆ ತೆರಳುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಿ ನಾಲ್ಕು ಗಂಟೆಗಳಿಗೂ ಅಧಿಕ ಸಮಯ ಮಾತುಕತೆ ನಡೆಸಿದರು. ಈ ಸಂದರ್ಭ ತಾನು ರಾಜೀನಾಮೆ ನೀಡುವ ಬಗ್ಗೆಯೂ ಕೂಡ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಹಾಗೂ ದೊಡ್ಡ ಗೌಡರು ಸಿಎಂ ಅವರನ್ನು ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ತಾಳ್ಮೆಯಿಂದ ಇರುವಂತೆ ಕಿವಿಮಾತು ಹೇಳಿದರು ಎನ್ನಲಾಗಿದೆ. ಮಾತ್ರವಲ್ಲದೇ ಸ್ಪೀಕರ್ ಅವರು ವಿಶ್ವಾಸಮತಕ್ಕೆ ದಿನನಿಗದಿ ಮಾಡಿದ ಮೇಲೆ ಮುಂದಿನ ಕಾರ್ಯತಂತ್ರಗಳನ್ನು ರೂಪಿಸುವಂತೆಯೂ ಪುತ್ರ ಸಿಎಂ ಹೆಚ್ ಡಿಕೆಗೆ ದೊಡ್ಡಗೌಡರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.