ಶ್ರೀಹರಿಕೋಟಾ, ಜು15(Daijiworld News/SS): ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದ್ದ ಚಂದ್ರಯಾನ 2 ಉಡಾವಣೆ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸೋಮವಾರ ನಸುಕಿನ ಜಾವ 2 ಗಂಟೆ 51 ನಿಮಿಷದಲ್ಲಿ ಉಡಾವಣೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಡಾವಣೆಯನ್ನು ರದ್ದುಗೊಳಿಸಲಾಗಿದೆ ಎಂದು ಇಸ್ರೋ ವಿಜ್ಞಾನಿಗಳು ತುರ್ತು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊನೆಯ ಕ್ಷಣದ ಪರಿಶೀಲನೆ ವೇಳೆ ತಾಂತ್ರಿಕ ದೋಷ ಕಂಡುಬಂತು. ಮುಂಜಾಗ್ರತಾ ಕ್ರಮವಾಗಿ ಉಡಾವಣೆಯನ್ನು ಸದ್ಯಕ್ಕೆ ರದ್ದು ಮಾಡಿ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ದೋಷವನ್ನು ಸರಿಪಡಿಸಿ ಅತಿ ಶೀಘ್ರದಲ್ಲೇ ಮತ್ತೊಮ್ಮೆ ಉಡಾವಣೆ ಸಮಯವನ್ನು ತಿಳಿಸಲಾಗುವುದು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಜು.15ರಂದು ನಸುಕಿನ 2 ಗಂಟೆ 51 ನಿಮಿಷಕ್ಕೆ ಉಡಾವಣೆ ನಿಗದಿಯಾಗಿತ್ತು. ಆದರೆ ನಾಲ್ಕು ನಿಮಿಷಗಳ ಮುನ್ನ ಉಡಾವಣೆ ಮುಂದೂಡಿಕೆ ಮಾಡುವ ಕುರಿತು ತಿಳಿಸಲಾಯಿತು. ಇದೇ ಮೊದಲ ಬಾರಿಗೆ ಚಂದ್ರನ ಧ್ರುವದಲ್ಲಿ ಮಾನವ ನಿರ್ಮಿತ ವಸ್ತು ಇಳಿಸಲು ಇಸ್ರೋ ಸಕಲ ತಯಾರಿ ಮಾಡಿಕೊಂಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದ ಉಡಾವಣೆ ರದ್ದಾಗಿದೆ.
ಚಂದ್ರಯಾನ 2 ಉಡಾವಣೆಯ ಮುಂದಿನ ದಿನಾಂಕವನ್ನು ಅತಿ ಶೀಘ್ರದಲ್ಲೇ ನಿಗದಿಪಡಿಸಲಾಗುವುದು ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಉಡಾವಣೆ ಕೇಂದ್ರಕ್ಕೆ ಐದು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ದೇಶದ ವಿವಿಧ ಭಾಗಗಳಿಂದ ಆಸಕ್ತರು ಇಲ್ಲಿಗೆ ಆಗಮಿಸಿದ್ದರು. ಉಡಾವಣೆ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಚಂದ್ರಯಾನ 2 ಉಡಾವಣೆ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆ