ಬೆಂಗಳೂರು, ಜು15(Daijiworld News/SS): ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ಬಿ.ಎಲ್.ಸಂತೋಷ್ ಅವರನ್ನು ಜು.14ರಂದು ನೇಮಕ ಮಾಡುವ ಮೂಲಕ ರಾಷ್ಟ್ರ ಮಟ್ಟದ ಮಹತ್ವದ ಹೊಣೆಯನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿದ್ದಾರೆ.
ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರ ನಂತರದ ಅತ್ಯಂತ ಪ್ರಮುಖ ಹುದ್ದೆ ಇದು. 13 ವರ್ಷಗಳಿಂದ ರಾಮ್ಲಾಲ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಅಖಿಲ ಭಾರತ ಸಹ ಸಂಪರ್ಕ ಪ್ರಮುಖ ಹುದ್ದೆಗೆ) ಮರಳಿದ್ದರು. ಈ ಜಾಗಕ್ಕೆ ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ.
ಈ ಹಿಂದೆಯೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕದ ಆರ್ಎಸ್ಎಸ್ ಕಟ್ಟಾಳು ಬಿ.ಎಲ್. ಸಂತೋಷ್ ಉನ್ನತ ಸ್ಥಾನಕ್ಕೆ ಏರಲಿದ್ದಾರೆ ಎನ್ನಲಾಗಿತ್ತು. ಅಂತೆಯೇ ಸಂತೋಷ್ ಆಪ್ತರಿಗೂ ರಾಜ್ಯ ಬಿಜೆಪಿಯಲ್ಲಿ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ ಎಂದೂ ಹೇಳಲಾಗುತ್ತಿತ್ತು.
ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಸೂಚನೆ ಮೇರೆಗೆ, ಸಂತೋಷ್ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕ್ಕಾರಕ್ಕೆ ಬರುವ ಮುನ್ನವೇ ಸಂತೋಷ್ ಅವರಿಗೆ ಉನ್ನತ ಹುದ್ದೆ ನೀಡಿರುವುದು ಭಾರೀ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಮತ್ತೆ ಏರುವ ಅಮಿತ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಅದೇ ಹೊತ್ತಿನಲ್ಲಿ, ಸಂತೋಷ್ ಅವರಿಗೆ ಬಡ್ತಿ ನೀಡಲಾಗಿದೆ.