ಬೆಂಗಳೂರು, ಜು15(Daijiworld News/SS): ಮೈತ್ರಿ ಸರಕಾರ ಪತನಗೊಳ್ಳಲಿದ್ದು, ಬಿಜೆಪಿ ಸರಕಾರ ರಚನೆ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ. ಹೀಗಾಗಿ ಎಲ್ಲರೂ ನಿರಾತಂಕವಾಗಿರಿ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಮೈತ್ರಿ ಸರಕಾರ ಪತನ ಪಕ್ಕಾ ಎಂದು ಶಾಸಕರಲ್ಲಿ ವಿಶ್ವಾಸ ತುಂಬಿರುವ ಯಡಿಯೂರಪ್ಪ ಸದನದಲ್ಲಿ ಯಾವ ರೀತಿ ನಡೆದುಕೊಳ್ಳಬೇಕೆಂಬ ಬಗ್ಗೆ ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಮಂಡನೆ ಮಾಡುತ್ತೇನೆ ಎಂದು ಸದನದಲ್ಲೇ ಘೋಷಿಸಿದ್ದಾರೆ. ಆ ಸಂದರ್ಭದಲ್ಲಿ ಅವರು ಬಿಜೆಪಿ ಹಾಗೂ ತಮ್ಮ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಲಿದ್ದಾರೆ. ಅವರು ಎಷ್ಟೇ ಪ್ರಚೋದನೆ ನೀಡಿದರೂ ಯಾರೂ ಸಹನೆ ಕಳೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.
ನಾವು ಸಹನೆ ಕಳೆದುಕೊಂಡು ಸದನದಲ್ಲಿ ಗದ್ದಲ ಸೃಷ್ಟಿಸಲಿ ಎಂಬುದೇ ಅವರ ಉದ್ದೇಶವಾಗಿರುವುದರಿಂದ ಈ ತಂತ್ರಕ್ಕೆ ನಾವು ಬಲಿ ಬೀಳಬಾರದು. ವಿಶ್ವಾಸಮತದ ವಿರುದ್ಧ ಮತ ಚಲಾಯಿಸುವ ಸಂದರ್ಭದಲ್ಲಿ ಏನೇನು ಮಾಡಬೇಕೆಂಬ ಬಗ್ಗೆ ಸಲಹೆ ಸೂಚನೆ ನೀಡುತ್ತೇವೆ ಎಂದು ವಿವರಿಸಿದರು.
ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗಲಿದೆ. ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಕಾಯೋಣ. ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಈಗಾಗಲೇ ಹೇಳಿರುವುದರಿಂದ ಸದನದಲ್ಲಿ ಬೇರೆ ಯಾವುದೇ ಕಲಾಪ ನಡೆಯುವುದಕ್ಕೆ ಈಗ ಅವಕಾಶವಿಲ್ಲ. ಕಲಾಪ ಸಲಹಾ ಸಮಿತಿ ಸಭೆಯಲ್ಲೂ ನಾನು ಇದೇ ವಿಚಾರ ಪ್ರತಿಪಾದಿಸುತ್ತೇನೆ ಎಂದು ಹೇಳಿದರು.
ಸೋಮವಾರವೇ ವಿಶ್ವಾಸ ಮತ ನಿರ್ಣಯ ಮಂಡನೆ ಮಾಡಲಿ ಎಂದು ಒತ್ತಾಯಿಸೋಣ. ಬೇರೆ ಯಾವುದೇ ಕಲಾಪದಲ್ಲಿ ನಾವು ಭಾಗವಹಿಸುವುದು ಬೇಡ. ಒಂದು ವೇಳೆ ಹಣಕಾಸು ವಿಧೇಯಕ ಮಂಡಿಸಿದರೆ ಇದಕ್ಕೆ ವಿರೋಧ ವ್ಯಕ್ತಪಡಿಸೋಣ ಎಂದು ತಿಳಿಸಿದ್ದಾರೆ.