ಲಕ್ನೋ, ಜು15(Daijiworld News/SS): ಉತ್ತರ ಪ್ರದೇಶದ ಬಲಿಯಾ ಬೈರಿಯಾದ ಶಾಸಕ ಸುರೇಂದ್ರ ಸಿಂಗ್ ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗಲು ಮುಸ್ಲಿಮರೇ ಕಾರಣ ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಮುಸ್ಲಿಂ ಧರ್ಮದಲ್ಲಿ ಒಬ್ಬ ಪುರುಷ 50 ಪತ್ನಿಯರನ್ನು ಹೊಂದಿರುತ್ತಾರೆ ಮತ್ತು ಸಾವಿರಕ್ಕಿಂತಲೂ ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ. ಇದು ಪರಂಪರೆ ಅಲ್ಲ. ಪ್ರಾಣಿಗಳಂತಹ ಪ್ರವೃತ್ತಿ. ದೇಶದಲ್ಲೀಗ ಜನಸಂಖ್ಯಾ ನಿಯಂತ್ರಣ ಎನ್ನುವುದು ಬಹುದೊಡ್ಡ ಸವಾಲಾಗಿ ಎದ್ದು ನಿಂತಿದ್ದು, ಮುಸ್ಲಿಂ ಸಮುದಾಯದವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಸಾಕ್ಷಿ ಮಹಾರಾಜ್ ಕೂಡ ಮುಸ್ಲಿಂ ಸಮುದಾಯದವರು ತಮ್ಮ ದೇಶದ ಪ್ರತಿ ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಜನಸಂಖ್ಯೆ ನಿಯಂತ್ರಣದತ್ತ ಗಮನ ಹರಿಸಬೇಕು. ಸರಕಾರ ಕೂಡ ಈ ದಿಶೆಯಲ್ಲಿ ಕಠಿಣ ಕಾನೂನು ರಚಿಸಬೇಕು ಎಂದು ಹೇಳಿದ್ದರು.
ಪಕ್ಷ ಮತ್ತು ಸರಕಾರದ ವರ್ಚಸ್ಸಿಗೆ ಕುಂದು ತರುವಂತಹ ಹೇಳಿಕೆಗಳನ್ನು ನೀಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಆಗಾಗ ಎಚ್ಚರಿಕೆ ನೀಡಿದ್ದರೂ ಸುರೇಂದ್ರ ಸಿಂಗ್, ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ ಮತ್ತೆ ಕೆಲವು ನಾಯಕರು ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇರುವುದು ಕೆಂಗಣ್ಣಿಗೆ ಗುರಿಯಾಗಿದೆ .