ಬೆಂಗಳೂರು, ಜು15(Daijiworld News/SS): ರಾಜ್ಯ ಸಮ್ಮಿಶ್ರ ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ನಡೆಯುತ್ತಿರುವ ಕಸರತ್ತು ಗುರುವಾರದವರೆಗೆ ಮುಂದುವರೆಯಲಿದ್ದು, ಜು.18 ರಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಜು.15 ರಂದು ಸ್ಪೀಕರ್ ನೇತೃತ್ವದಲ್ಲಿ ನಡೆದ ಕಲಾಪ ಸದನ ಸಮಿತಿ ಸಭೆಯಲ್ಲಿ, ಗುರುವಾರದಂದು ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಗುರುವಾರ ಸಿಎಂ ವಿಶ್ವಾಸಮತಯಾಚನೆಗೆ ಒಪ್ಪಿಗೆ ಸೂಚಿಸಿರುವ ಬಿಜೆಪಿ ನಾಯಕರು ಜು.18 ವರೆಗೆ ಯಾವುದೇ ಕಲಾಪವನ್ನೂ ನಡೆಸದಂತೆ ಸ್ಪೀಕರ್'ಗೆ ಮನವಿ ಮಾಡಿದ್ದಾರೆ. ವಿಧಾನಸಭೆ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿದ್ದು, ಪ್ರತಿಪಕ್ಷದ ಬೇಡಿಕೆಯಂತೆ ಅಲ್ಲಿಯವರೆಗೆ ಬೇರೆ ಕಲಾಪ ನಡೆಸುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚಿಸಲಿದೆ ಎಂದು ಅವರು ಸದನದಲ್ಲಿ ಘೋಷಿಸಿದ್ದಾರೆ. ಇದರೊಂದಿಗೆ ಹಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಇನ್ನೂ ಮೂರು ದಿನಗಳ ಕಾಲ ಮುಂದುವರಿಯುವುದು ನಿಶ್ಚಿತವಾಗಿದೆ.
ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು ನಾವು ಗುರುವಾರದಂದು ವಿಶ್ವಾಸಮತಯಾಚನೆಗೆ ಒಪ್ಪಿಗೆ ಸೂಚಿಸಿದ್ದೇವೆ. ಆದರೆ ವಿಶ್ವಾಸಮತಯಾಚನೆ ಬಳಿಕವಷ್ಟೇ ಕಲಾಪ ನಡೆಯಬೇಕೆಂದು ಮನವಿ ಮಾಡಿದ್ದೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಹೇಳಿದ್ದಾರೆ.
ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ವಿಪಕ್ಷ ನಾಯಕ ಯಡಿಯೂರಪ್ಪ ಸಭೆಯಲ್ಲಿ ಭಾಗವಹಿಸಿದ್ದರು.