ಬೆಂಗಳೂರು, ಜು15(Daijiworld News/SS): ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಬಹುಮತ ಇಲ್ಲದೆ ಸರ್ಕಾರ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಬಹುಮತ ಇಲ್ಲದೆ ಸರ್ಕಾರ ನಡೆಯುತ್ತಿದೆ. ಇದು ಸರಿಯಲ್ಲ. ಬಹುಮತ ಇಲ್ಲದೆ ಸಿಎಂ ಸ್ಥಾನದಲ್ಲಿ ಕುಮಾರಸ್ವಾಮಿ ಕೂರಲು ಸಾಧ್ಯವಿಲ್ಲ. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನಡೆಗೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸದನದಲ್ಲಿ ಧಿಕ್ಕಾರ ಕೂಗಿದರು. ಈ ವೇಳೆ ಉಪಸಭಾಪತಿ ಧರ್ಮೇಗೌಡ ಪರಿಸ್ಥಿತಿ ತಿಳಿ ಮಾಡಲು ಯತ್ನಿಸಿದರು. ಆದರೆ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಉಪಸಭಾಪತಿಗಳು ಕಲಾಪವನ್ನು ಮುಂದೂಡಿದರು.
ಸಿಎಂ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸ ಮತ ಯಾಚನೆ ಮಾಡುವ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ಗುರುವಾರದವರೆಗೆ ಮುಂದೂಡಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ. ಕುಮಾರ್ ಅವರನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ ಗುರುವಾರ ವಿಶ್ವಾಸ ಮತ ಯಾಚನೆ ಮಾಡುವುದಾಗಿ ಮನವಿ ಮಾಡಿದರು. ಸಿಎಂ ಮನವಿಯನ್ನು ಪುರಸ್ಕರಿಸಿದ ರಮೇಶ್ ಕುಮಾರ್ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸ ಮತ ಯಾಚನೆ ಮಾಡಲು ಸಮಯ ನಿಗದಿ ಮಾಡಿದ್ದಾರೆ.
ವಿಧಾನಸಭೆ ಕಲಾಪ ಆರಂಭಗೊಂಡ ತಕ್ಷಣ ಗುರುವಾರ ಸಿಎಂ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ ಎಂದು ತಿಳಿಸಿದರು. ಆ ನಂತರ ವಿಪಕ್ಷಗಳು ಕಲಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಮುಂದೂಡಿದರು. ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಿರುವಾಗ ಸದನ ನಡೆಸುವುದು ಎಷ್ಟು ಸರಿ ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಕಲಾಪ ನಾಳೆಗೆ ಮುಂದೂಡಲಾಗಿದೆ.