ನವದೆಹಲಿ, ಜು15(Daijiworld News/SS): ಇಂದು ಉಡಾವಣೆ ಆಗಬೇಕಿದ್ದ ಚಂದ್ರಯಾನ-2 ಸರಿಯಾದ ಸಮಯಕ್ಕೆ ರದ್ದುಗೊಂಡಿದ್ದರಿಂದ ತುಂಬ ಒಳ್ಳೆಯದಾಗಿದೆ. ದೊಡ್ಡ ಅನಾಹುತ ಆಗುವುದನ್ನು ನಮ್ಮ ವಿಜ್ಞಾನಿಗಳು ತಪ್ಪಿಸಿದ್ದಾರೆ. ಅವರ ಪ್ರಯತ್ನವನ್ನು ಶ್ಲಾಘಿಸಲೇಬೇಕು ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮಾಜಿ ಸಾರ್ವಜನಿಕ ಸಂಪರ್ಕ ನಿರ್ದೇಶಕ ರವಿ ಗುಪ್ತಾ ಹೇಳಿದ್ದಾರೆ.
ಬಹುನಿರೀಕ್ಷಿತ ಚಂದ್ರಯಾನ-2 ತಾಂತ್ರಿಕ ದೋಷದಿಂದ ರದ್ದುಗೊಂಡಿದೆ. ಚಂದ್ರಯಾನ ಉಡಾವಣೆ ಎಂಬುದು ದೊಡ್ಡ ಯೋಜನೆ. ಇದನ್ನು ಉಡಾವಣೆ ಮಾಡುವಾಗ ತಾಂತ್ರಿಕ ದೋಷ ಕಂಡುಬರುವುದು ಸಹಜ. ಅದನ್ನು ಕಂಡು ಹಿಡಿದು ಸರಿಯಾದ ಸಮಯದಲ್ಲಿ ವಿಜ್ಞಾನಿಗಳು ತಡೆ ಹಿಡಿದಿದ್ದಾರೆ. ಇದೂ ಕೂಡ ಯಶಸ್ಸೇ ಆಗಿದೆ. ಹಾಗೊಮ್ಮೆ ರದ್ದುಗೊಳಿಸದೆ ಇದ್ದರೆ ಮುಂದೆ ಏನಾದರೂ ವಿಪತ್ತು ಎದುರಾಗುವ ಸಾಧ್ಯತೆ ಇತ್ತು ಎಂದು ತಿಳಿಸಿದ್ದಾರೆ.
ಈಗ ಉಂಟಾಗಿರುವ ತಾಂತ್ರಿಕ ದೋಷವನ್ನು ಸರಿಪಡಿಸಿ ಹೊಸ ದಿನಾಂಕದಂದು ಉಡಾವಣೆ ಮಾಡಲಿದ್ದಾರೆ. ಉಡಾವಣಾ ವಾಹಕವಾದ ಜಿಎಸ್ಎಲ್ವಿ ಎಂಕೆ-3ರಲ್ಲಿ ಕಾಣಿಸಿಕೊಂಡಿರುವ ದೋಷ ಏನು ಎಂಬ ಬಗ್ಗೆ ವಿವರವಾದ ಅಧ್ಯಯನ ಮಾಡಲಾಗುತ್ತದೆ. ಇದರ ಕುರಿತಂತೆ ವಿಜ್ಞಾನಿಗಳು ಆಳವಾಗಿ ಪರಿಶೀಲನೆ ಮಾಡಲೇಬೇಕು. ಇಂತಹ ದೊಡ್ಡ ಬಾಹ್ಯಾಕಾಶ ನೌಕೆಯ ಪ್ರತಿ ಭಾಗವನ್ನೂ ಪರೀಕ್ಷಿಸಿತ್ತೇವೆ ಎಂದು ಹೇಳಿದ್ದಾರೆ.
ಒಮ್ಮೆಲೇ ಎದುರಾಗುವ ಸಮಸ್ಯೆಗಳಿಂದ ನಾವೂ ಕೂಡ ಹೊಸದನ್ನು ಕಲಿಯುತ್ತೇವೆ. ಹಠಾತ್ ಆಗಿ ಎದುರಾಗುವ ಸವಾಲುಗಳನ್ನು ಎದುರಿಸುತ್ತಲೇ ವಿಜ್ಞಾನದಲ್ಲಿ ಹೆಚ್ಚಿನದನ್ನು ಸಾಧಿಸಬಹುದು. ಚಂದ್ರಯಾನ -2ರ ಉದ್ದೇಶ ಬರೀ ಚಂದ್ರನನ್ನು ತಲುಪುವದಷ್ಟೇ ಅಲ್ಲ, ನಮ್ಮ ವೈಜ್ಞಾನಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಹೌದು ಎಂದು ಹೇಳಿದ್ದಾರೆ.
ಈ ಬಾಹ್ಯಾಕಾಶ ನೌಕೆಯಲ್ಲಿ ಸಾವಿರಾರು ಬಿಡಿ ಭಾಗಗಳು ಸಂಕೀರ್ಣವಾಗಿರುತ್ತವೆ. ಇದನ್ನೆಲ್ಲ ವಿಧಿವತ್ತಾಗಿ ಸೂಕ್ತ ಸ್ಥಳದಲ್ಲಿ ಸರಿಯಾಗಿ ಕೂರಿಸಲು ಸುಮಾರು 50 ದಿನಗಳೇ ಬೇಕಾಗಿರುತ್ತವೆ. ಈಗ ವಾಹಕದ ಎಂಜಿನ್ನ್ನು ಹೊರತೆಗೆದು ದೋಷವನ್ನು ಪತ್ತೆ ಮಾಡಬೇಕು. ಅದಾದ ಬಳಿಕ ದುರಸ್ತಿ ಮಾಡಿ ಮರುಜೋಡಣೆಗೊಳಿಸಬೇಕು ಎಂದು ತಿಳಿಸಿದ್ದಾರೆ.
ಎಲ್ಲವೂ ಸರಿಯಾಗಿದೆ ಎಂದ ಮೇಲಷ್ಟೇ ಚಂದ್ರಯಾನ-2 ಉಡಾವಣೆಯ ಹೊಸ ದಿನಾಂಕದ ಘೋಷಣೆ ಆಗಲಿದೆ ಎಂದು ಹೇಳಿದ್ದಾರೆ.