ಬೆಂಗಳೂರು, ಜು 15 (DaijiworldNews/SM): ದೋಸ್ತಿ ಸರಕಾರ ವಿಶ್ವಾಸವನ್ನು ಹೊಂದಿದ್ದ ಶಾಸಕ ರಾಮಲಿಂಗಾ ರೆಡ್ಡಿ ನಡೆ ಇದೀಗ ನಿಗೂಢವಾಗಿದ್ದು, ದೋಸ್ತಿ ಸರಕಾರದಲ್ಲಿ ಫುಲ್ ಟೆನ್ಷನ್ ಗೆ ಕಾರಣವಾಗಿದೆ. ರವಿವಾರದಂದು ದಿನವಿಡಿ ಅವರನ್ನು ಮನವೊಲಿಕೆಗೆ ಯತ್ನಿಸಿದರಾದರೂ ಯಾವುದೇ ಫಲ ಸಿಕ್ಕಿಲ್ಲ.
ಸೋಮವಾರದಂದು ಸದನಕ್ಕೆ ಹಾಜರಾಗುತ್ತೇನೆ ಎಂದಿದ್ದ ಶಾಸಕ ರಾಮಲಿಂಗಾ ರೆಡ್ದಿ, ಸದನಕ್ಕೆ ಗೈರಾಗಿದ್ದಾರೆ. ಮತ್ತೊಂದೆಡೆ ರಾಜೀನಾಮೆ ಬಗ್ಗೆ ಪರಿಶೀಲನೆಗೆ ಸಂಬಂಧಿಸಿದಂತೆ ಸ್ಪೀಕರ್ ಮುಂದೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ, ಅಲ್ಲಿಯೂ ಕೂಡ ಅವರು ಹಾಜರಾಗಿಲ್ಲ. ಈ ಬಗ್ಗೆ ಸ್ಪೀಕರ್ ಹಾಗೂ ಸಚಿವಾಲಯದ ಕಾರ್ಯದರ್ಶಿಗೂ ಮಾಹಿತಿ ನೀಡಿದ್ದು, ಇಂದು ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ಶಾಸಕ ರಾಮಲಿಂಗಾ ರೆಡ್ಡಿ ದೋಸ್ತಿ ಸರಕಾರದಿಂದ ಸಾಕಷ್ಟು ನೊಂದುಕೊಂಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಗೃಹಖಾತೆಯನ್ನು ಹೊಂದಿದ್ದ ಹಿರಿಯ ಸಚಿವರಾಗಿದ್ದರು. ಆದರೆ, ಈ ಬಾರಿಯ ಸಂಪುಟದಿಂದ ಅವರನ್ನು ಕೈಬಿಟ್ಟಿರುವುದು ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರ ನಡೆ ಸಮ್ಮಿಶ್ರ ಸರಕಾರಕ್ಕೆ ನುಂಗಲಾರದ ಬಿಸಿತುಪ್ಪದಂತಾಗಿದ್ದು, ವಿಶ್ವಾಸಮತ ಉಳಿಸಿಕೊಳ್ಳಲು ಪರದಾಡುವಂತಾಗಿದೆ.