ಬೆಂಗಳೂರು, ಜು 15 (DaijiworldNews/SM): ಒಂದೆಡೆ ಶಾಸಕರ ರಾಜೀನಾಮೆಯಿಂದ ಕಂಗೆಟ್ಟಿರುವ ದೋಸ್ತಿ ಸರಕಾರಕ್ಕೆ ಇದೀಗ ಹೊಸ ಸಮಸ್ಯೆ ಎದುರಾಗಿದೆ. ಪ್ರಸ್ತುತ ಪಕ್ಷದಲ್ಲಿರುವ ಕಾಂಗ್ರೆಸ್ ಪಕ್ಷದ ಶಾಸಕರು ಇದೀಗ ಹಿರಿಯ ನಾಯಕರ ವಿರುದ್ಧ ತಿರುಗಿಬಿದ್ದಿದ್ದು, ಸಮ್ಮಿಶ್ರ ಸರಕಾರಕ್ಕೆ ಡಬಲ್ ಟೆಂನ್ಷನ್ ಆಗಿ ಮಾರ್ಪಟ್ಟಿದೆ.

ಸರಕಾರ ನಡೆಸಲಾಗದಿದ್ದರೆ, ವಿಪಕ್ಷ ಸ್ಥಾನದಲ್ಲಿ ಮುಂದುವರೆಯುವ ಎಂಬುವುದಾಗಿ ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಸೋಮವಾರ ಸಂಜೆ ನಡೆದ ಸಭೆಯಲ್ಲಿ ಹಿರಿಯ ನಾಯಕರ ವಿರುದ್ಧ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಪ್ರಮುಖವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕರು ಗರಂ ಆಗಿದ್ದಾರೆ.
ಅತಿಯಾದ ಆತ್ಮ ವಿಶ್ವಾಸವನ್ನು ಬಿಟ್ಟು ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡಿ ಎಂದಿರುವ ಶಾಸಕರು, ಪಕ್ಷ ಉಳಿಯಬೇಕಾದರೆ, ಕಾರ್ಯಕರ್ತರು ಪ್ರಮುಖವಾಗಿದ್ದಾರೆ ಎಂದು ಸಲಹೆ ನೀಡಿದ್ದಾರೆ. ಸದ್ಯ ಪಕ್ಷಕ್ಕೆ ಸಾಕಷ್ಟು ಹಾನಿ ಸಂಭವಿಸಿದೆ ಇದನ್ನು ಸರಿಪಡಿಸಲು ಸಾಧ್ಯವಿದೆಯೇ ಎಂದು ಶಾಸಕರು ಹಿರಿಯ ನಾಯಕರನ್ನು ಪ್ರಶ್ನಿಸಿದ್ದಾರೆ.