ನವದೆಹಲಿ, ಜು16(Daijiworld News/SS): ಇನ್ಮುಂದೆ ರಸಗೊಬ್ಬರ ಸಬ್ಸಿಡಿಯನ್ನು ರೈತರ ಬ್ಯಾಂಕ್ ಖಾತೆಗಳಿಗೇ ನೇರವಾಗಿ ವರ್ಗಾಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಹೇರಳವಾಗಿ ಬಳಕೆ ಆಗುತ್ತಿರುವ ರಾಸಾಯನಿಕ ರಸಗೊಬ್ಬರಕ್ಕೆ ಕಡಿವಾಣ ಹಾಕಲು ತೀರ್ಮಾನಿಸಿರುವ ಕೇಂದ್ರ ಸರ್ಕಾರ, ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಎಲ್ಪಿಜಿ ಮತ್ತು ವಿದ್ಯುತ್ ಸಬ್ಸಿಡಿಗಳ ನೇರ ವರ್ಗಾವಣೆ ರೀತಿಯಲ್ಲೇ ರಸಗೊಬ್ಬರ ಸಬ್ಸಿಡಿಯೂ ವರ್ಗಾವಣೆ ಆಗಲಿದೆ. ಈ ಪ್ರಕ್ರಿಯೆಯಿಂದಾಗ ರಸಗೊಬ್ಬರ ಖರೀದಿ ಪ್ರಮಾಣ ನಿಯಂತ್ರಣಕ್ಕೆ ಬರುವ ಜತೆಗೆ ಬಳಕೆ ಪ್ರಮಾಣ ನಿಗದಿಗಿಂತ ಹೆಚ್ಚಾದಲ್ಲಿ ಅದಕ್ಕೆ ಸಬ್ಸಿಡಿ ಸಿಗುವುದಿಲ್ಲ.
ಸದ್ಯ ನೀತಿ ಆಯೋಗ ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ. ಇದರಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ವರ್ಗಾವಣೆ ಅಥವಾ ಎಕರೆ ಅಥವಾ ಹೆಕ್ಟೇರ್ಗೆ ಇಂತಿಷ್ಟು ಸಬ್ಸಿಡಿ ಮೊತ್ತವೆಂದು ನಿಗದಿಪಡಿಸಿ ಪ್ರಧಾನಮಂತ್ರಿ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಇದನ್ನು ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಸಬ್ಸಿಡಿಯ ನೇರ ವರ್ಗಾವಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ಪ್ರತಿಯೊಬ್ಬ ರೈತನನ್ನೂ ತಲುಪಲು ಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಎರಡು ಪ್ರಸ್ತಾವನೆಗಳಲ್ಲಿ ಒಂದಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕರೆ ಮುಂದಿನ ಮೂರು ನಾಲ್ಕು ತಿಂಗಳ ಅವಧಿಯಲ್ಲಿ ಇದು ಜಾರಿಗೆ ಬರಲಿದೆ. ಆದರೆ ರೈತರು ಹೊಂದಿರುವ ಭೂಮಿಯ ಗಾತ್ರವನ್ನು ನಿಖರವಾಗಿ ಗುರುತಿಸುವುದು ಸದ್ಯದ ಸವಾಲಾಗಿದೆ. ಹೀಗಾಗಿ ಪಿಎಂ ಕಿಸಾನ್ ಯೋಜನೆಯಲ್ಲಿರುವ ಡೇಟಾಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.