ಶಿಮ್ಲಾ, ಜು16(Daijiworld News/SS): ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಬಹುಮಹಡಿ ಕಟ್ಟಡ ಕುಸಿದ ಪ್ರಕರಣದಲ್ಲಿ ಮೃತರ ಸಂಖ್ಯೆ 14ಕ್ಕೇರಿದೆ. ಈ ಪೈಕಿ 13 ಮಂದಿ ಯೋಧರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರಂತ ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಮತ್ತಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಲಾನ್ನ ನಹನ್ ಕುಮಾರ್ ಹಟ್ಟಿ ರಸ್ತೆಯಲ್ಲಿನ ಈ ಕಟ್ಟಡ ನಿನ್ನೆ ರಾತ್ರಿ ಕುಸಿದು ಬಿತ್ತು. ರೆಸ್ಟೊರೆಂಟ್ ಸೇರಿದಂತೆ 4 ಮಹಡಿಗಳು ಈ ಕಟ್ಟಡದಲ್ಲಿದ್ದವು. ಈ ದುರ್ಘಟನೆಯಲ್ಲಿ 13 ಯೋಧರು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದಾನೆ ಎಂದು ಸೋಲಾನ್ ಪೊಲೀಸ್ ವರಿಷ್ಠಾಧಿಕಾರಿ ಮಧುಸೂಧನ್ ತಿಳಿಸಿದ್ದಾರೆ.
ಕುಸಿದ ಕಟ್ಟಡದ ಅವಶೇಷದಲ್ಲಿ ಇನ್ನೂ ಕೆಲ ಮಂದಿ ಸಿಲುಕಿರುವ ಶಂಕೆಯಿದ್ದು, ಅವರ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದೆ. ಕಟ್ಟಡ ಕುಸಿದು ಬಿದ್ದ ಸಂದರ್ಭದಲ್ಲಿ 42ಕ್ಕೂ ಹೆಚ್ಚು ಮಂದಿ ಅಲ್ಲಿದ್ದರು. ಈ ಪೈಕಿ ಹಲವರು ಮೃತಪಟ್ಟಿದ್ದು, ಇನ್ನು ಕೆಲ ಯೋಧರು ಸೇರಿದಂತೆ 28 ಜನರನ್ನು ರಕ್ಷಿಸಲಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಎಂದು ಸೋಲಾನ್ ಉಪವಿಭಾಗೀಯ ದಂಡಾಧಿಕಾರಿ ರೋಹಿತ್ ರಾಥೋಡ್ ತಿಳಿಸಿದ್ದಾರೆ.