ಬೆಂಗಳೂರು ಜು 16 (Daijiworld News/MSP): ಐಎಂಎ ಬಹುಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಶಿವಾಜಿನಗರ ಶಾಸಕ ರೋಷನ್ ಬೇಗ್ ರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಸೋಮವಾರ ರಾತ್ರಿ ಮುಂಬಯಿಗೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಿದ್ದ ರೋಷನ್ ಬೇಗ್ ಅವರನ್ನು ಇನ್ನೇನು ವಿಮಾನ ಹತ್ತುತ್ತಾರೆ ಎನ್ನುವಾಗ ಎಸ್ಐಟಿ ಅಧಿಕಾರಿಗಳು ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದು, ವಿಮಾನ ನಿಲ್ದಾಣದಲ್ಲೇ ಹಿರಿಯ ಅಧಿಕಾರಿಗಳಿಂದ ಅವರ ವಿಚಾರಣೆ ನಡೆದಿದೆ ಎನ್ನಲಾಗಿದೆ.
ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ ದೇಶದಿಂದ ಪರಾರಿ ಆಗುವ ಮೊದಲು ದೇಶದಿಂದ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ಶಾಸಕ ರೋಷನ್ ಬೇಗ್ ತಮ್ಮಿಂದ ಕೋಟಿಗಟ್ಟಲೆ ಹಣ ಪಡೆದಿದ್ದರು ಎಂದು ಆರೋಪಿಸಿದ್ದರು. ಎಸ್ಐಟಿ ಅಧಿಕಾರಿಗಳು ಈ ಕುರಿತಂತೆ ಹಣ ಪಡೆದ ಬಗ್ಗೆ ಮತ್ತು ಆ ಹಣವನ್ನು ಏನು ಮಾಡಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಎಸ್ಐಟಿ ಕೇಳುತ್ತಿರುವ ಪ್ರಶ್ನೆಗಳಿಗೆ ನನಗೆ ಗೊತ್ತಿಲ್ಲ ಎಂದು ಬೇಗ್ ಹೇಳುತ್ತಿದ್ದಾರೆ. ನಿಮಗೆ ಐಎಂಎ ಮಾಲೀಕ ಮನ್ಸೂರ್ ಖಾನ್ ಗೊತ್ತಾ, ಮನ್ಸೂರ್ ಖಾನ್ ಜೊತೆ ಹಣಕಾಸು ವ್ಯವಹಾರ ಹೊಂದಿದ್ರಾ, ಮನ್ಸೂರ್ ಖಾನ್ ಮಾಡಿದ ಆರೋಪದ ಬಗ್ಗೆ ಏನ್ ಹೇಳ್ತೀರಾ ಎಂಬ ಪ್ರಶ್ನೆಗಳು ಎಸ್ಐಟಿ ಬೇಗ್ ಮುಂದಿಟ್ಟಿದೆ.
ಮಧ್ಯರಾತ್ರಿ ನೀವು ಎಲ್ಲಿಗೆ ಹೊರಟಿರುವುದು, ದೇಶ ಬಿಡುವ ಪ್ಲಾನ್ ಹಾಕಿಕೊಂಡಿದ್ರಾ, ವಿಶೇಷ ವಿಮಾನವನ್ನು ಬುಕ್ ಮಾಡಿದ್ದು ಯಾರು? ಎಂದು ಸರಣಿ ಪ್ರಶ್ನೆಗಳನ್ನು ಎಸ್ಐಟಿ ಅಧಿಕಾರುಗಳು ರೋಷನ್ ಬೇಗ್ ಕೇಳಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೋಟ್ಯಂತರ ರೂಪಾಯಿ ಹಣ ನಿಮ್ಮ ಖಾತೆಗೆ ಜಮೆಯಾಗಿದೆ ಇದಕ್ಕೆ ನಿಮ್ಮ ಉತ್ತರವೇನು ? ಎಂದು ಎಸ್ಐಟಿ ಅಧಿಕಾರಿಗಳು ಪ್ರಶ್ನಿಸಿದಾಗ, ಅದು ನನ್ನ ಪತ್ರಿಕೆಗೆ ಸಂಬಂಧ ಪಟ್ಟಂತೆ ಹಣ ವ್ಯವಹಾರ ಆಗಿರಬಹುದು ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.
ನಿಮ್ಮ ಮಗನ ಮದುವೆಗೆ ಚಾರ್ಟೆಡ್ ಫ್ಲೈಟ್ ಮನ್ಸೂರ್ ಖಾನ್ ಬುಕ್ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬೇಗ್, ಇದ್ಯಾವುದು ಈಗ ನನಗೆ ಸರಿಯಾಗಿ ನೆನಪಿಲ್ಲ. ಈ ಘಟನೆ ನಡೆದು ಸಾಕಷ್ಟು ವರ್ಷಗಳಾಗಿವೆ ಎಂದಿದ್ದಾರೆ. ನಿಮ್ಮ ಮಗನ ಮದುವೆಗಾಗಿ ಫ್ಲೈಟ್ ಬುಕ್ ಮಾಡಿರೋದಕ್ಕೆ ಸಾಕಷ್ಟು ದಾಖಲೆಗಳಿವೆ ಎಂದು ಎಸ್ಐಟಿ ಕೇಳಿದ್ದಕ್ಕೆ ನಮ್ಮಿಬ್ಬರ ನಡುವೆ ಇದ್ದ ಸ್ನೇಹದಿಂದ ಈ ಫ್ಲೈಟ್ ಬುಕ್ಕಿಂಗ್ ಮಾಡಿರಬಹುದು ಎಂದು ಉತ್ತರಿಸಿದ್ದಾರೆ.