ಬೆಂಗಳೂರು, ಜು16(Daijiworld News/SS): ಐಎಂಎ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದ ಎಸ್ಐಟಿ ಸತತ 13 ಗಂಟೆಗಳ ವಿಚಾರಣೆ ಬಳಿಕ ಇಂದು ಅವರನ್ನು ಬಿಡುಗಡೆ ಮಾಡಿದೆ.
ಜುಲೈ 19ರವರೆಗೆ ಎಲ್ಲಿಯೂ ತೆರಳದಂತೆ ಸೂಚನೆ ನೀಡಿದೆ. ಹಾಗೇ ಅಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ರೋಷನ್ ಬೇಗ್ಗೆ ಸೂಚನೆ ನೀಡಿದ್ದಾರೆ.
ರೋಷನ್ ಬೇಗ್ ಅವರನ್ನು ಎಸ್ಐಟಿ ವಶಕ್ಕೆ ಪಡೆದ ಬೆನ್ನಲ್ಲೇ ಅವರ ಮಗ ಹೈಕೋರ್ಟ್ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲ ಶ್ಯಾಮ್ಸುಂದರ್ ಮೂಲಕ ಅರ್ಜಿ ಸಲ್ಲಿಸಿದೆ. ಅಲ್ಲದೆ, ಜು.19 ರಂದು ವಿಚಾರಣೆಗೆ ಹಾಜರಾಗುವಂತೆ ಈ ಮೊದಲು ಎಸ್ಐಟಿ ತಿಳಿಸಿತ್ತು. ಆದರೆ, ಏಕಾಏಕಿ ಏರ್ಪೋರ್ಟ್ನಿಂದ ಕರೆದುಕೊಂಡು ಹೋಗುವ ಅಗತ್ಯ ಏನಿತ್ತು ಎಂದು ಕುಟುಂಬದವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಐಎಂಎ ವಂಚನೆ ಪ್ರಕರಣ ಸಂಬಂಧ ಶಿವಾಜಿನಗರ ಕ್ಷೇತ್ರದ ಶಾಸಕ ಮಾಜಿ ಸಚಿವ ಆರ್ ರೋಷನ್ ಬೇಗ್ರನ್ನ ಎಸ್ಐಟಿ ತಂಡ ಸಿನಿಮಾ ಸ್ಟೈಲಲ್ಲಿ ವಶಕ್ಕೆ ಪಡೆದಿತ್ತು. ಎಸ್ಐಟಿ ನೀಡಿದ್ದ ನೋಟಿಸ್ ಪ್ರಕಾರ ಸೋಮವಾರ ರೋಷನ್ ಬೇಗ್ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಮುಂಬೈಗೆ ಹಾರೋ ಪ್ಲಾನ್ನಲ್ಲಿದ್ದ ರೋಷನ್ ಬೇಗ್ 10 ಗಂಟೆ 35 ನಿಮಿಷಕ್ಕೆ ಸರಿಯಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದೇ ವೇಳೆ ಸ್ಥಳಕ್ಕೆ ಎಂಟ್ರಿ ಕೊಟ್ಟ ಡಿಸಿಪಿ ಗಿರೀಶ್ ನೇತೃತ್ವದ ಎಸ್ಐಟಿ ತಂಡ 11 ಗಂಟೆ ಸುಮಾರಿಗೆ ರೋಷನ್ ಬೇಗ್ರನ್ನು ವಶಕ್ಕೆ ಪಡೆದಿತ್ತು.