ಬೆಂಗಳೂರು, ಜು16(Daijiworld News/SS): ರಾಜಕೀಯ ಪಿತೂರಿಯಿಂದ ಎಸ್ಐಟಿ ನನ್ನನ್ನು ವಶಕ್ಕೆ ಪಡೆದಿತ್ತು ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ.
ಜು.15ರಂದು ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದಿದ್ದ ಎಸ್ಐಟಿ, ಇದೀಗ ಸುದೀರ್ಘ ವಿಚಾರಣೆಗಳ ಬಳಿಕ ಅವರನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ, ನನ್ನನ್ನು ಎಸ್ಐಟಿಯವರು ವಿಚಾರಣೆ ಕರೆದಿದ್ದರು. ಇದೀಗ ವಿಚಾರಣೆ ಮಾಡಿ ಕಳುಹಿಸಿದ್ದಾರೆ. ಸದ್ಯ ನಾನು ಮನೆಗೆ ಹೋಗುತ್ತಿದ್ದೇನೆ. ನಿಮಗೆ ನನ್ನಿಂದ ಏನು ಸಹಕಾರ ಬೇಕೋ ಅದನ್ನು ನಾನು ಕೊಡುತ್ತೇನೆ ಅಂತಾ ಎಸ್ಐಟಿಗೆ ಹೇಳಿದ್ದೇನೆ ಎಂದು ತಿಳಿಸಿದರು.
ನಿನ್ನೆ ನಾನು ಪುಣೆಗೆ ತೆರಳಬೇಕಿತ್ತು. ಆದರೆ ನಾನು ಎಲ್ಲೋ ಓಡಿ ಹೋಗುತ್ತೇನೆ ಎಂದು ಕೆಲವರು ನನ್ನ ವಿರುದ್ಧ ಪಿತೂರಿ ಮಾಡಿದರು. ಆದರೆ ನಾನು ಯಾರ ಮೇಲೂ ಆರೋಪ ಮಾಡಲು ಹೋಗಲ್ಲ. ಯಾಕೋ ಅವರಿಗೆ ಗೊಂದಲವಾಗಿದೆ ಅನಿಸುತ್ತದೆ ಎಂದು ತಿಳಿಸಿದರು.
ಹಜ್ ಯಾತ್ರೆಗೆ ಹೋಗಲು ನಿರ್ಧರಿಸಿದ್ದೆ. ಆದರೆ, ಆಗಲಿಲ್ಲ. ನಾನು ನಿನ್ನೆ ಇಲ್ಲಿಂದ ಪುಣೆಗೆ ಹೋಗುತ್ತಿದ್ದೆ. ಆದರೆ, ಪರಾರಿಯಾಗುತ್ತೇನೆ ಎಂದು ಕರೆದುಕೊಂಡು ಬಂದರು. ವಿಚಾರಣೆಗೆ ಪೂರ್ತಿ ಸಹಕಾರ ಕೊಡುತ್ತೇನೆ. ಯಾವಾಗ ಕರೆದರೂ ಬರುತ್ತೇನೆ ಎಂದು ಹೇಳಿದ್ದಾರೆ.