ಮುಂಬೈ, ಜು 16 (Daijiworld News/MSP): ಮುಂಬಯಿನ ಡೋಂಗ್ರಿಯಲ್ಲಿ ಬಹುಮಹಡಿ ಕಟ್ಟಡ ಕುಸಿದಿದ್ದು, ಅವಶೇಷಗಳಡಿಯಲ್ಲಿ 50 ಕ್ಕೂ ಹೆಚ್ಚು ಜನ ಸಿಲುಕಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ಕಟ್ಟಡ ದುರಂತಕ್ಕೆ ಹನ್ನೆರಡು ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮುಂಬಯಿನ ಡೋಂಗ್ರಿ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದ್ದು ನಾಲ್ಕು ಅಂತಸ್ತಿನ ’ಕೇಸರಿಬಾಯಿ ’ ಕಟ್ಟಡ ಸಂಪೂರ್ಣವಾಗಿ ನೆಲಕಚ್ಚಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಎನ್ಡಿಆರ್ಎಫ್ ತಂಡಗಳು ಧಾವಿಸಿದ್ದು ಭರದಿಂದ ರಕ್ಷಣಾ ಕಾರ್ಯಾಚರಣೆ ಸಾಗಿದೆ.
ಕಟ್ಟಡದ ಅವಶೇಷಗಳಡಿ 10-12 ಕುಟುಂಬಗಳು ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಕಟ್ಟಡದ ಕುಸಿತದ ಸ್ಥಳಕ್ಕೆ ಸ್ಥಳೀಯ ಶಾಸಕ ಅಮಿನ್ ಪಟೇಲ್ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.
ಮಹಾರಾಷ್ಟ್ರ ಗೃಹ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಕಟ್ಟಡ ಇದಾಗಿದೆ ಎಂದು ತಿಳಿದುಬಂದಿದೆ. ಡೋಂಗ್ರಿಯಲ್ಲಿರುವ ಅಬ್ದುಲ್ ಹಮೀದ್ ದರ್ಗಾದ ಹಿಂಭಾಗದಲ್ಲಿರುವ ತಾಂಡೇಲ್ ರಸ್ತೆಯಲ್ಲಿದ್ದ ಈ ಕೇಸರಿ ಭಾಯ್ ಹೆಸರಿನ ಕಟ್ಟಡದಲ್ಲಿ 15 ಕುಟುಂಬಗಳು ವಾಸಿಸುತ್ತಿದ್ದವು ಎಂಬ ಮಾಹಿತಿ ಲಭ್ಯವಾಗಿದ್ದು, ಈ ವರೆಗೆ ಐವರನ್ನು ಸುರಕ್ಷಿತವಾಗಿ ಅವಶೇಷಗಳಡಿಯಿಂದ ರಕ್ಷಿಸಲಾಗಿದೆ.