ಜಮ್ಶೆಡ್ಪುರ, ಜು 16 (Daijiworld News/RD): ತಾನು ಕೇಳಿದಾಗ ಊಟ ಬಡಿಸಿ ಕೊಟ್ಟಿಲ್ಲವೆಂಬ ಕಾರಣಕ್ಕೆ ಸಿಟ್ಟಿಗೆದ್ದ ಮಗನೊಬ್ಬ ಹೆತ್ತ ತಾಯಿಯನ್ನೇ ಕಟ್ಟಿಗೆಯಿಂದ ಬಡಿದು ಕೊಂದ ಘಟನೆ ಜಮ್ಶೆಡ್ಪುರದ ಕುಲ್ದಿಹದಲ್ಲಿ ನಡೆದಿದೆ. ಆರೋಪಿಯನ್ನು 28 ವರ್ಷದ ಬಿಷ್ಟು ಸಿಂಗ್ ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ
ಬಿಷ್ಟು ಸಿಂಗ್ ಮದ್ಯವ್ಯಸನಿಯಾಗಿದ್ದು, ಆತನಿಗೆ ಪ್ರತಿ ನಿತ್ಯ ಕುಡಿದು ಬಂದು ಮನೆಯಲ್ಲಿ ಹಾಗೂ ಮನೆಯ ಆಸುಪಾಸಿನಲ್ಲಿ ಜಗಳವಾಡುವುದು ಚಟವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಎಂದಿನಂತೇ ಕುಡಿದು ಬಂದ ಮಗನು ಊಟ ಬಡಿಸುವಂತೆ ತಾಯಿಗೆ ಹೇಳಿದಾಗ ಆಕೆ ಊಟ ಬಡಿಸಿ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಬಿಷ್ಟು ಸಿಂಗ್ ಕಟ್ಟಿಗೆಯಿಂದ ಹೆತ್ತ ತಾಯಿಯನ್ನು ಥಳಿಸಿದ್ದಾನೆ. ಮಗ ನಡೆಸಿದ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ 55 ವರ್ಷದ ತಾಯಿ ಸ್ಥಳದಲ್ಲೇ ಅಸುನೀಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಪಿತಾಂಬರ್ ಖೇರ್ವಾರ್ ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಬಳಿಕ ಇನ್ನಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.