ಬೆಂಗಳೂರು, ಜು 16(DaijiworldNews/SM): ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೋಷನ್ ಬೇಗ್ ಅವರನ್ನು ಮಾತ್ರ ಯಾಕೆ ಬಂಧಿಸಲಾಗಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ತಡರಾತ್ರಿ ಶಾಸಕ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಐಎಂಎ ಮಂಗಳವಾರ ಮಧ್ಯಾಹ್ನದವರೆಗೂ ಸತತ ವಿಚಾರಣೆ ನಡೆಸಿತ್ತು. ಇದೇ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್ ಅವರ ಹೆಸರು ಕೇಳಿ ಬಂದಿದೆ. ಆದರೆ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
'ಐಎಂಎ ಪ್ರಕರಣದಲ್ಲಿ ಯಾರು ಲೂಟಿ ಮಾಡಿದ್ದಾರೆಯೋ ಅವರನ್ನು ಬಂಧಿಸಿ ಮೋಸ ಹೋದವರಿಗೆ ಹಣ ವಾಪಸ್ ಕೊಡಿಸಬೇಕಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಸರ್ಕಾರ ಎಸ್ಐಟಿಯನ್ನು ದುರ್ಬಳಕೆ ಮಾಡುತ್ತಿದೆ. ತನಗೆ ಬೇಕಾದಂತೆ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದೆ' ಎಂದು ಆರೋಪಿಸಿದ್ದಾರೆ.