ಕೊಡಗು, ಜು17(Daijiworld News/SS): ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಹಿನ್ನಲೆ, ಜಿಲ್ಲೆಯಾದ್ಯಂತ 5 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕೊಡಗು ಜಿಲ್ಲಾಡಳಿತ ಈ ಕುರಿತು ಪ್ರಕಟಣೆಯನ್ನು ಹೊರಡಿಸಿದ್ದು, ಜುಲೈ 18 ರಿಂದ 22ರ ತನಕ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. 115.6 ಮಿ. ಮೀನಿಂದ 204.4 ಮಿ.ಮೀ. ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳು ಉಂಟಾದರೆ ತಕ್ಷಣ ಸಂಪರ್ಕಿಸಲು ಜಿಲ್ಲಾಡಳಿತ ಟೋಲ್ ಫ್ರೀ ಸಂಖ್ಯೆಯನ್ನು ನೀಡಿದೆ.
ಜು.16ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 3.24 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 74.66 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ 707.31 ಮಿ.ಮೀ ಮಳೆ ಜಿಲ್ಲೆಯಲ್ಲಿ ಆಗಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ವರುಣನ ಅಬ್ಬರಕ್ಕೆ ಅನೇಕರು ಮನೆ, ತೋಟ ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ಭಾರೀ ಪ್ರಮಾಣದ ಪ್ರಾಣಹಾನಿ ಸಂಭವಿಸಿತ್ತು. ಹೀಗಾಗಿ ಕೊಡಗು ಜಿಲ್ಲಾಡಳಿತವು ಈ ಬಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ದೇಶಾದ್ಯಂತ ಮುಂಗಾರು ಚುರುಕಾಗಿದ್ದು ಹಲವೆಡೆ ಪ್ರವಾಹ ಸೃಷ್ಟಿಯಾಗಿದೆ. ಅಸ್ಸಾಂ, ಬಿಹಾರದಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು 40 ಲಕ್ಷ ಮಂದಿ ಅಪಾಯದಲ್ಲಿದ್ದಾರೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಶೇ. 95 ಭಾಗ ಹಾನಿಗೊಳಗಾಗಿದೆ. ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಈ ತನಕ 43 ಲಕ್ಷ ಜನರು ಕಷ್ಟಕ್ಕೆ ಸಿಲುಕಿದ್ದಾರೆ. 33 ಜಿಲ್ಲೆಗಳಲ್ಲಿ 31 ಜಿಲ್ಲೆ ಪ್ರವಾಹದಿಂದ ಹಾನಿಗೀಡಾಗಿವೆ.