ಬೆಂಗಳೂರು, ಜು17(Daijiworld News/SS): ವೇತನ ಪರಿಷ್ಕರಣೆ ಹಾಗೂ ಬಡ್ತಿ ತಾರತಮ್ಯ ನಿವಾರಣೆ ಸೇರಿದಂತೆ ಪೊಲೀಸರ ಅನೇಕ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿದ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ನೀಡಿರುವ ವರದಿ ಜಾರಿ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಪೊಲೀಸರ ವೇತನ ಪರಿಷ್ಕರಣೆ ಕುರಿತು ನೀಡಲಾಗಿರುವ ವರದಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಂಕಿತ ಹಾಕಿದ್ದು, ಅಧಿಕೃತ ಆದೇಶ ಹೊರಬೀಳಲಿದೆ. ಶೇ. 30ಕ್ಕೆ ಬದಲಾಗಿ ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ವರದಿ ಜಾರಿಯಿಂದ ಸರ್ಕಾರದ ಮೇಲೆ 630 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದ್ದು, ಆರ್ಥಿಕ ಹೊರೆಯನ್ನು ತಪ್ಪಿಸಲು ಮೂಲವರದಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.
ಈ ವೇತನ ಪರಿಷ್ಕರಣೆ ಆಗಸ್ಟ್ 1ರಿಂದಲೇ ಜಾರಿಯಾಗಲಿದೆ. ಇದರಿಂದ ಸರಕಾರಕ್ಕೆ 650 ಕೋಟಿ ರೂ. ವಾರ್ಷಿಕ ಹೊರೆಯಾಗಲಿದೆ. ಸರಕಾರದ ತೀರ್ಮಾನದಿಂದ ಪೊಲೀಸರ ವೇತನ ಹೆಚ್ಚಳ ಹಾಗೂ ಕೆಲವು ಹೆಚ್ಚುವರಿ ಸೌಲಭ್ಯಗಳು ದೊರೆಯಲಿವೆ. ನಿವೃತ್ತಿಯಾಗಿರುವ ಪೊಲೀಸರಿಗೂ ಹೆಚ್ಚುವರಿ ಸೌಲಭ್ಯ ನೀಡಲಾಗಿದೆ.
2016ರಲ್ಲಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಪೊಲೀಸರ ವೇತನ ಪರಿಷ್ಕಾರ ಬೇಡಿಕೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ರಚಿಸಲಾಗಿತ್ತು. ಕೆಲವು ರಾಜ್ಯಗಳ ಪೊಲೀಸ್ ಇಲಾಖೆಯ ವೇತನ ಆಧರಿಸಿ, ಅಧ್ಯಯನ ನಡೆಸಿ ಪೊಲೀಸರಿಗೆ ಶೇಕಡ 30ರಷ್ಟು ವೇತನ ಹೆಚ್ಚಿಸುವಂತೆ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. ಆದರೆ ವರದಿ ಜಾರಿಯಾಗಿರಲಿಲ್ಲ. ಬಳಿಕ ಗೃಹ ಸಚಿವ ಎಂಬಿ ಪಾಟೀಲ್ ವರದಿ ಜಾರಿಗೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅಂಕಿತ ಹಾಕಿದ್ದಾರೆ.
ರಾಜಕೀಯ ಕ್ಷಿಪ್ರಕ್ರಾಂತಿಯ ನಡುವೆಯೂ ಪೊಲೀಸರಿಗೆ ಸಿಹಿ ಸುದ್ದಿ ದಕ್ಕಿದೆ. ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ವೇತನ ಪರಿಷ್ಕರಣೆ ಹಾಗೂ ಬಡ್ತಿ ತಾರತಮ್ಯ ಸಮಸ್ಯೆ ನಿವಾರಣೆಗೆ ಸರಕಾರ ಮುಂದಾಗಿರುವುದು ಸಂತಸಕ್ಕೆ ಕಾರಣವಾಗಿದೆ.