ಶಿವಮೊಗ್ಗ, ಜ. 12 (DaijiworldNews/TA) : ತಪ್ಪು ಮಾಡಿದವರನ್ನು ಗಡಿಪಾರು ಮಾಡಿರುವುದು, ಕೊಲೆ–ಸುಲಿಗೆ ಮಾಡಿದವರನ್ನು ಜೈಲಿಗೆ ಹಾಕಿರುವುದು, ಅಸ್ಪೃಶ್ಯತೆ ಹೆಸರಿನಲ್ಲಿ ಊರಿಂದ ಬಹಿಷ್ಕರಿಸಿರುವ ಘಟನೆಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಇಲ್ಲಿ ಎಲ್ಲರ ಒಳಿತಿಗಾಗಿ ಊರನ್ನೇ ಕಾಯುವ ದೇವತೆಗಳನ್ನೇ ಗಡಿದಾಟಿಸುವ ಅಪರೂಪದ ಸಂಪ್ರದಾಯವನ್ನು ಇಂದಿಗೂ ಆಚರಿಸಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡದಲ್ಲಿ ಬಂಜಾರ ಸಮುದಾಯದವರು ತಲೆತಲಾಂತರಗಳಿಂದ ಆಚರಿಸಿಕೊಂಡು ಬರುತ್ತಿರುವ ಈ ಸಂಪ್ರದಾಯ ಈಗಲೂ ಜೀವಂತವಾಗಿದೆ. ತಂತ್ರಜ್ಞಾನ ಮತ್ತು ಆಧುನಿಕತೆಯ ಈ ಕಾಲದಲ್ಲೂ, ಮೂಢನಂಬಿಕೆಗಳಿಗಿಂತ ವಾಸ್ತವ ಹೆಚ್ಚು ಮಾತನಾಡುವ ಯುಗದಲ್ಲೂ, ತಮ್ಮ ಪೂರ್ವಜರಿಂದ ಬಂದ ನಂಬಿಕೆ ಮತ್ತು ಆಚರಣೆಗಳನ್ನು ಗ್ರಾಮಸ್ಥರು ಅಷ್ಟೇ ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಊರಿನ ಜನರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಜಾನುವಾರುಗಳಿಗೆ ಯಾವುದೇ ರೋಗ–ರುಜುನೆಗಳು ಬಾರದಂತೆ ಇರಲಿ ಎಂಬ ಉದ್ದೇಶದಿಂದ ಇಡೀ ಊರೆ ಸೇರಿ ಈ ವಿಶೇಷ ಆಚರಣೆಯನ್ನು ನಡೆಸುತ್ತಾರೆ. ಹಬ್ಬದ ದಿನ ಊರಿನ ಎಲ್ಲರೂ ಊರಿನ ಹೊರಭಾಗಕ್ಕೆ ತೆರಳಿ ಅಲ್ಲಿಯೇ ಅಡುಗೆ ಮಾಡುತ್ತಾರೆ. ವಿಶೇಷವೆಂದರೆ ಕತ್ತಲಲ್ಲಿ ಊಟ ಸೇವಿಸಿ, ನಂತರ ಸಪ್ತ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಯುವಕರು ಸೇರಿ ದೇವತೆಗಳನ್ನು ತಮ್ಮ ಊರಿನ ಗಡಿದಾಟಿಸಿ ಬರುತ್ತಾರೆ.
ಈ ಆಚರಣೆಗೆ ಚಳಿಗಾಲವೇ ಪ್ರಮುಖ ಕಾರಣ ಎನ್ನಲಾಗುತ್ತದೆ. ಚಳಿಯ ಸಮಯದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಜಾನುವಾರುಗಳಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬ ನಂಬಿಕೆ ಇರುವುದರಿಂದ, ಯಾವುದೇ ಕಾಯಿಲೆಗಳು ತಗುಲದಂತೆ ಇರಲಿ ಎಂಬ ಉದ್ದೇಶದಿಂದ ಈ ಸಂಪ್ರದಾಯವನ್ನು ಬಂಜಾರ ಸಮುದಾಯದವರು ಪಾಲಿಸಿಕೊಂಡು ಬಂದಿದ್ದಾರೆ.
ಪ್ರತಿ ಮನೆಯೊಂದಕ್ಕೆ ಸಾವಿರ ರೂಪಾಯಿಯಂತೆ ಹಣ ಸಂಗ್ರಹಿಸಿ ದೇವಿಗೆ ಕುರಿ ಹರಕೆ ನೀಡಲಾಗುತ್ತದೆ. ನಂತರ ಊರಿನ ಹೊರಭಾಗದಲ್ಲಿ ಎಲ್ಲರೂ ಸೇರಿ ಊಟ ಮಾಡಲಾಗುತ್ತದೆ. ಪೂಜೆಯ ನಂತರ ದೇವತೆಯನ್ನು ಮುಂದಿನ ಊರಿಗೆ ಕಳುಹಿಸಿಕೊಟ್ಟು ಬರುತ್ತಾರೆ. ಇದರಿಂದ ಮಕ್ಕಳು, ಹಿರಿಯರು ಹಾಗೂ ಜಾನುವಾರುಗಳಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗುವುದಿಲ್ಲ ಎಂಬುದು ನಂಬಿಕೆ ಎನ್ನಲಾಗಿದೆ.
ಒಟ್ಟಿನಲ್ಲಿ ಆಧುನಿಕ ಜಗತ್ತಿನಲ್ಲಿ ಆಚರಣೆಗಳು ಮತ್ತು ನಂಬಿಕೆಗಳು ನಿಧಾನವಾಗಿ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ, ಶಿವಮೊಗ್ಗ ಜಿಲ್ಲೆಯ ಶೀರಿಹಳ್ಳಿ ತಾಂಡದಲ್ಲಿ ಇಂತಹ ಅಪರೂಪದ ಸಂಪ್ರದಾಯ ಇಂದಿಗೂ ಉಳಿದುಕೊಂಡಿರುವುದು ವಿಶೇಷವೆನಿಸುತ್ತದೆ.