ಗದಗ, ಜ. 12 (DaijiworldNews/TA): ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿರುವುದು ಇಡೀ ರಾಜ್ಯದ ಗಮನ ಸೆಳೆದಿದೆ. ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ಅಡಿಪಾಯಕ್ಕಾಗಿ ಪಾಯ ಅಗೆಯುವ ವೇಳೆ, ಹಿತ್ತಾಳೆ ತಂಬಿಗೆಯೊಂದರಲ್ಲಿ ಚಿನ್ನದ ನಾಣ್ಯಗಳು ಹಾಗೂ ಆಭರಣಗಳು ಪತ್ತೆಯಾಗಿವೆ. ಈ ಸುದ್ದಿ ಹೊರಬಿದ್ದ ಕೂಡಲೇ ಲಕ್ಕುಂಡಿ ಗ್ರಾಮ ಮತ್ತೆ ಚರ್ಚೆಯ ಕೇಂದ್ರವಾಗಿದೆ.

ಪತ್ತೆಯಾದ ಚಿನ್ನವನ್ನು ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಒಪ್ಪಿಸಲಾಗಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ, ಇಲ್ಲಿ ಸಿಕ್ಕಿರುವುದು ನಿಧಿಯಲ್ಲ, ಅದು ಕುಟುಂಬದ ಪೂರ್ವಜರು ಇಟ್ಟುಹೋಗಿರುವ ಚಿನ್ನವಾಗಿರಬಹುದು ಎಂದು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಲಕ್ಕುಂಡಿ ಗ್ರಾಮದಲ್ಲಿ ಹಿಂದಿನಿಂದಲೂ ಅನೇಕ ಕಡೆ ಚಿನ್ನ ಸಿಕ್ಕಿದೆ ಎಂಬ ವಿಚಾರವನ್ನು ಸ್ಥಳೀಯರು ಬಾಯ್ಬಿಟ್ಟಿದ್ದು, ನಿಧಿ ಕುರಿತ ಚರ್ಚೆ ಮತ್ತಷ್ಟು ತೀವ್ರವಾಗಿದೆ.
ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ ಲಕ್ಕುಂಡಿ ಗ್ರಾಮದ ಹಿರಿಯರಾದ ಈರಪ್ಪ ಕಣವಿ, ಲಕ್ಕುಂಡಿಯಲ್ಲಿ ಚಿನ್ನ ಸಿಕ್ಕಿರುವುದು ಇದೇ ಮೊದಲಲ್ಲ ಎಂದು ಹೇಳಿದ್ದಾರೆ. ಈ ಗ್ರಾಮದಲ್ಲಿ 101 ಬಾವಿಗಳು ಹಾಗೂ 101 ಬಾವಿ ದೇವಸ್ಥಾನಗಳಿದ್ದು, ಇತಿಹಾಸ ಪ್ರಸಿದ್ಧವಾದ ಈ ಊರಲ್ಲಿ ಟಂಕಸಾಲೆ ಇದ್ದ ಕಾರಣ ಚಿನ್ನ ಸಿಗುತ್ತಿತ್ತು ಎಂಬ ನಂಬಿಕೆ ಇದೆ. ಹಿಂದಿನ ಕಾಲದಲ್ಲಿ ಮಳೆ ಬಂದರೆ ಸಾಕು, ಗ್ರಾಮದಲ್ಲಿ ಹಲವರು ಚಿನ್ನ ಹುಡುಕಾಟ ನಡೆಸುತ್ತಿದ್ದರು. ನಾವು ಚಿಕ್ಕವರಾಗಿದ್ದಾಗಲೇ ಈ ಹುಡುಕಾಟಗಳನ್ನು ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ.
ನಿಧಿ ಎಂಬ ಆಸೆಗೆ ಬಿದ್ದು ಅನೇಕರು ಲಕ್ಕುಂಡಿಗೆ ಬಂದಿರುವ ಉದಾಹರಣೆಗಳೂ ಇವೆ ಎಂದು ಈರಪ್ಪ ಕಣವಿ ಭಯಾನಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸಾವಗಿ ಭರಮಪ್ಪ ದೇವಸ್ಥಾನದ ಬಳಿ ನಿಧಿಗೆ ಕನ್ನ ಹಾಕಿದ್ದ ಘಟನೆಗಳಿವೆ. ನಿಧಿಯ ಆಸೆಗೆ ಬಿದ್ದ ಕೆಲವರು ರಕ್ತಕಾರಿ ಸಾವನ್ನಪ್ಪಿದ ಉದಾಹರಣೆಗಳೂ ಇದ್ದಾವೆ ಎಂದು ಅವರು ತಿಳಿಸಿದ್ದಾರೆ. ಈ ಕಾರಣದಿಂದಲೇ ಲಕ್ಕುಂಡಿಯಲ್ಲಿ ನಿಧಿ ಹುಡುಕಾಟಕ್ಕೆ ಸಂಬಂಧಿಸಿದ ಭೀತಿ ಮತ್ತು ರಹಸ್ಯಗಳ ಕಥೆಗಳು ಇಂದಿಗೂ ಜೀವಂತವಾಗಿವೆ.
ಈ ಬಾರಿ ಚಿನ್ನ ಸಿಕ್ಕಿರುವುದು ಲಕ್ಷ್ಮೀ ದೇವಸ್ಥಾನದ ಸಮೀಪವಾಗಿರುವುದರಿಂದ ವಿಚಾರ ಬಹಿರಂಗವಾಗಿದೆ. ಹಿಂದಿನ ದಿನಗಳಲ್ಲಿ ಚಿನ್ನ ಸಿಕ್ಕವರು ಅದನ್ನು ಬಹಿರಂಗಪಡಿಸದೇ ಇಟ್ಟುಕೊಂಡಿದ್ದರು ಎನ್ನುವ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ. ಹೀಗಾಗಿ ಲಕ್ಕುಂಡಿಯಲ್ಲಿ ಎಲ್ಲೆಂದರಲ್ಲಿ ಚಿನ್ನ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ.
ಚಿನ್ನ ಸಿಕ್ಕ ತಕ್ಷಣ ಮನೆಮಾಲೀಕರು ಗ್ರಾಮದ ಹಿರಿಯರಿಗೆ, ಪಂಚಾಯಿತಿ ಸದಸ್ಯರಿಗೆ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿದ್ದು ಪಾಟೀಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಿದ್ದು ಪಾಟೀಲ್ ಅವರು ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ್ ಅವರಿಗೆ ವಿಷಯ ತಿಳಿಸಿದ್ದು, ಸಚಿವರ ನಿರ್ದೇಶನದಂತೆ ಜಿಲ್ಲಾಡಳಿತ, ಪೊಲೀಸ್ ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಲಕ್ಕುಂಡಿ ಗ್ರಾಮಕ್ಕೆ ದೌಡಾಯಿಸಿ ವಾಸ್ತವಾಂಶ ಪರಿಶೀಲನೆ ನಡೆಸಿದ್ದಾರೆ.
ಪುರಾತತ್ವ ಇಲಾಖೆ ಇದು ನಿಧಿ ಅಲ್ಲ ಎಂದು ಸ್ಪಷ್ಟಪಡಿಸಿರುವ ಬೆನ್ನಲ್ಲೇ, ಪತ್ತೆಯಾದ ಚಿನ್ನವನ್ನು ಕುಟುಂಬಕ್ಕೆ ಮರಳಿಸಬೇಕು ಎಂದು ಸಂಬಂಧಪಟ್ಟ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ಇತಿಹಾಸ, ನಿಧಿಯ ಕಥೆಗಳು ಮತ್ತು ಇತ್ತೀಚಿನ ಪತ್ತೆ ಎಲ್ಲಾ ಸೇರಿ ಮತ್ತೆ ಲಕ್ಕುಂಡಿಯನ್ನು ರಹಸ್ಯ ಮತ್ತು ಕುತೂಹಲದ ಕೇಂದ್ರವನ್ನಾಗಿ ಮಾಡಿವೆ.