ನವದೆಹಲಿ, ಜು 17 (Daijiworld News/RD): ಉತ್ತರ ಹಾಗೂ ಈಶಾನ್ಯ ಭಾರತದ ಐದು ರಾಜ್ಯಗಳು ಪ್ರವಾಹಕ್ಕೆ ತುತ್ತಾಗಿವೆ. ಇನ್ನು ಅಸ್ಸಾಂ ರಾಜ್ಯವೊಂದರಲ್ಲೇ 33 ಜಿಲ್ಲೆಗಳಲ್ಲಿ 30 ಜಿಲ್ಲೆಗಳು ಮುಳುಗಡೆಯಾಗಿದ್ದು, ೧೫ ಮಂದಿ ಪ್ರವಾಹದಿಂದ ದುರ್ಮರಣ ಹೊಂದಿದ್ದಾರೆ.
ಈ ಬಗ್ಗೆ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಕಳಕಳಿ ವ್ಯಕ್ತಪಡಿಸಿದ್ದರು. " ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ತ್ರಿಪುರಾ ಮತ್ತು ಮಿಜೋರಾಂ ರಾಜ್ಯಗಳು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಹಪೀಡಿತ ರಾಜ್ಯಗಳ ಸಂತ್ರಸ್ತರ ನೆರವಿಗೆ ಧಾವಿಸಿ, ಪರಿಹಾರ ಕಾರ್ಯಗಳನ್ನು ಕೈಗೊಳ್ಳಿ" ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಹಾಗೂ ಪ್ರವಾಹಕ್ಕೆ ಸಂಬಂಧಿತ ಕೆಲವು ಪೊಟೋಗಳನ್ನು ಪೋಸ್ಟ್ ಮಾಡಿದ್ದರು.
ಆದರೆ ಅವರು ಮಾಡಿದ ಟ್ವೀಟ್ನಲ್ಲಿ ಒಂದಷ್ಟು ಫೋಟೊಗಳು 2013 ಹಾಗೂ 2016ರ ಬ್ಲಾಗ್ವೊಂದರಲ್ಲಿ ಬಳಕೆಯಾಗಿದ್ದ ಅಸ್ಸಾಂ ಪ್ರವಾಹಕ್ಕೆ ಸಂಬಂಧಪಟ್ಟ ಹಳೆಯ ಚಿತ್ರಗಳಾಗಿವೆ. ಇದನ್ನು ಗಮನಿಸಿದ ಟ್ವಿಟ್ಟಿಗರು ರಾಹುಲ್ ಅವರ ಕಾಲೆಳೆದಿದ್ದಾರೆ.
ಅಸ್ಸಾಂ ರಾಜ್ಯದಲ್ಲಿ ಪ್ರವಾಹದಿಂದ ಇಪ್ಪತ್ತೈದು ಜಿಲ್ಲೆಗಳ, 2217 ಗ್ರಾಮಗಳಲ್ಲಿ ಸುಮಾರು 14,06,711 ಜನರು ಬಾಧಿತರಾಗಿದ್ದಾರೆ. ಪರಿಹಾರ ಮತ್ತು ರಕ್ಷಣಾ ಉದ್ದೇಶಕ್ಕಾಗಿ ಸುಮಾರು 62 ಪರಿಹಾರ ಶಿಬಿರಗಳು ಮತ್ತು 172 ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿದುಬಂದಿದೆ.