ಮುಂಬೈ, ಜು17(Daijiworld News/SS): ಮುಂಬೈನಲ್ಲಿ ಜು.16ರಂದು ಕುಸಿದಿದ್ದ 4 ಅಂತಸ್ತಿನ ಕಟ್ಟಡ ದುರಂತ ಪ್ರಕರಣದಲ್ಲಿ ಈವರೆಗೂ ಸಾವಿಗೀಡಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಇಂದೂ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಹಲವು ದಿನಗಳಿಂದ ಮುಂಬೈ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಮಳೆಯ ಕಾರಣದಿಂದ ಹಲವು ಅವಘಡ ಸಂಭವಿಸುತ್ತಿವೆ. ಮುಂಬೈನ ಡೊಂಗ್ರಿ ಪ್ರದೇಶದ ಟಂಡೆಲ್ ಸ್ಟ್ರೀಟ್ ನಲ್ಲಿರುವ ಕೇಸರ್ಬಾಯಿ ಕಟ್ಟಡ ನಿನ್ನೆ ಬೆಳಗ್ಗೆ 11.40ರ ಸುಮಾರಿಗೆ ಕುಸಿದು ಬಿದ್ದಿದೆ. ಕಟ್ಟಡ ಕುಸಿಯುವ ವೇಳೆ ಸುಮಾರು 60ಕ್ಕೂ ಹೆಚ್ಚು ಮಂದಿ ಕಟ್ಟಡದೊಳಗೆ ಇದ್ದರು ಎನ್ನಲಾಗಿದೆ. ಈ ಪೈಕಿ ಈ ವರೆಗೂ 14 ಮಂದಿ ಸಾವನ್ನಪ್ಪಿದ್ದು, ಇನ್ನೂ ಅವಶೇಷಗಳಡಿಯಲ್ಲಿ 40ಕ್ಕೂ ಹೆಚ್ಟು ಮಂದಿ ಸಿಲುಕಿರುವ ಶಂಕೆ ಇದೆ. ಹೀಗಾಗಿ ಅಗ್ನಿ ಶಾಮಕ ದಳ ಹಾಗೂ ರಾಷ್ಟ್ಪೀಯ ವಿಪತ್ತು ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇನ್ನು ಘಟನೆ ಕುರಿತು ತನಿಖೆಗೆ ಆದೇಶಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಸುಮಾರು ನೂರು ವರ್ಷಗಳ ಹಳೆಯ ಕಟ್ಟಡ ಇದಾಗಿದ್ದು, 2012ರಲ್ಲೇ ಕಟ್ಟಡ ತೆರವು ಗೊಳಿಸಲು ಆದೇಶ ನೀಡಲಾಗಿತ್ತು. ಅಲ್ಲದೆ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸಂಪೂರ್ಣ ತನಿಖೆ ನಡೆಸಲಾಗುವುದು. 15 ಕುಟುಂಬ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ.
ಗಾಯಗೊಂಡವರನ್ನು ನಗರದ ಜೆ.ಜೆ.ಆಸ್ಪತ್ರೆ ಮತ್ತು ಹಬೀಬ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಕೇಸರ್ಭಾಯ್ ಕಟ್ಟಡ ಕುಸಿತ ಸ್ಥಳದಲ್ಲಿ ಎನ್ಡಿಆರ್ಎಫ್ ಪಡೆಯ ಶ್ವಾನದಳದ ಸಹಾಯದಿಂದ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ.