ಬೆಂಗಳೂರು, ಜು17(Daijiworld News/SS): ಸರ್ಕಾರ ಬಿದ್ದು ಹೋಗುವುದು ಖಚಿತ, ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಇದು ಪ್ರಜಾಪ್ರಭುತ್ವದ ಗೆಲುವು. ಸ್ಪೀಕರ್ ರಾಜೀನಾಮೆ ಬಗ್ಗೆ ಬೇಗ ತೀರ್ಮಾನ ತಗೊಂಡು ಸುಪ್ರೀಂಕೋರ್ಟ್ಗೆ ತನ್ನ ತೀರ್ಪು ತಿಳಿಸಬೇಕು ಅಂತ ಹೇಳಿದ್ದೇನೆ. ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಶಾಸಕರ ಮೇಲೆ ಒತ್ತಡ ಹೇರುವಂತಿಲ್ಲ. ಕುಮಾರಸ್ವಾಮಿ ನಾಳೆ ವಿಶ್ವಾಸಮತ ಪ್ರಸ್ತಾವ ಮಂಡಿಸುತ್ತಾರೆ. ಅವರು ಈಗ ಸದನದ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಸರ್ಕಾರ ಬಿದ್ದು ಹೋಗುವುದು ಖಚಿತ ಎಂದು ಹೇಳಿದ್ದಾರೆ.
ಕುಮಾರಸ್ವಾಮಿಯವರು ಬಹುಮತ ಕಳೆದುಕೊಂಡಿದ್ದಾರೆ. ಬಹುಮತ ಇಲ್ಲದಿರುವಾಗ ನಾಳೆ ಅವರು ರಾಜೀನಾಮೆ ನೀಡಲೇಬೇಕು. ಎಚ್ಡಿ ಕುಮಾರಸ್ವಾಮಿಯವರಿಂದಾಗಿ ರಾಜ್ಯದಲ್ಲಿ ಅರಾಜಕತೆ ಇದೆ. ಸುಪ್ರೀಂ ತೀರ್ಪಿನ ನಂತರ ಅವರು ತಕ್ಷಣ ರಾಜೀನಾಮೆ ನೀಡಬೇಕು. ವಿಶ್ವಾಸ ಮತಕ್ಕಾಗಿ ಕಾಯಬಾರದು ಎಂದು ಹೇಳಿದರು.
ರಾಜ್ಯದ ಮೈತ್ರಿ ಸರ್ಕಾರದ ಅಳಿವು–ಉಳಿವಿನ ಪ್ರಶ್ನೆಯನ್ನು ಹುಟ್ಟು ಹಾಕಿದ್ದ ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆಗೆ ಸಂಬಂಧಿಸಿದ ಮಹತ್ವದ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್ ಇಂದು ಮಧ್ಯಂತರ ಆದೇಶ ನೀಡಿದೆ. ಸೂಕ್ತ ಕಾಲಮಿತಿಯಲ್ಲಿ ಪ್ರಕರಣವನ್ನು ಇತ್ಯರ್ಥ ಮಾಡುವಂತೆ ಸ್ಪೀಕರ್ಗೆ ಹೇಳಿದೆ. ಇದು ಮಧ್ಯಂತರ ಆದೇಶವಾಗಿದ್ದು, ಪ್ರಕರಣದ ವಿಸ್ತೃತ ವಿಚಾರಣೆಯ ನಂತರ ಅಂತಿಮ ತೀರ್ಪು ನೀಡುವುದಾಗಿಯೂ ತಿಳಿಸಿದೆ.
ಗುರುವಾರ ಕರ್ನಾಟಕ ವಿಧಾನಸಭೆಯಲ್ಲಿ ನಡೆಯುವ ವಿಶ್ವಾಸಮತ ಪ್ರಕ್ರಿಯೆಗೆ ಸದ್ಯ ರಾಜೀನಾಮೆ ಸಲ್ಲಿಸಿರುವ 15 ಶಾಸಕರು ಬರಲೇ ಬೇಕು ಎಂದು ಒತ್ತಡ ಹೇರುವಂತಿಲ್ಲ ಮತ್ತು ಅವರಿಗೆ ವಿಪ್ ಅನ್ವಯವಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋರ್ಟ್ನ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹಲವು ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ.