ನವದೆಹಲಿ, ಜು 17 (Daijiworld News/MSP): ರಾಜ್ಯ ರಾಜಕೀಯವನ್ನು ಡೋಲಾಯಮಾನ ಸ್ಥಿತಿಗೆ ಕೊಂಡೊಯ್ದ ಕಾಂಗ್ರೆಸ್, ಜೆಡಿಎಸ್ ನ 15 ಶಾಸಕರ ರಾಜೀನಾಮೆ ಅರ್ಜಿ ಕುರಿತು ಸುಪ್ರೀಂಕೋರ್ಟ್ ಪೀಠ ಬುಧವಾರ ಬೆಳಗ್ಗೆ ಮಧ್ಯಂತರ ಆದೇಶವನ್ನು ಪ್ರಕಟಿಸಿದೆ. ಅತೃಪ್ತ ಶಾಸಕರ ರಾಜೀನಾಮೆ ಕುರಿತು ಕಾಲಮಿತಿಯೊಳಗೆ ತೀರ್ಪು ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನಿರ್ದೇಶನ ನೀಡಿದೆ.
ಕೇವಲ ಎರಡು ವಾಕ್ಯಗಳಲ್ಲಿ ತೀರ್ಪು ಓದಿದ ಸಿಜೆಐ ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧರಿಸಲಿ ಮಾತ್ರವಲ್ಲದೆ ಶಾಸಕರ ಅನರ್ಹತೆಯ ಬಗ್ಗೆಯೂ ಸ್ಪೀಕರ್ ನಿರ್ಧಾರ ಕೈಗೊಳ್ಳಬಹುದು ಆದರೆ ನಾಳೆ ಅಂದರೆ ಗುರುವಾರವೇ ವಿಶ್ವಾಸಮತ ಯಾಚನೆ ಮಾಡಿ. ಇಲ್ಲಿ ರಾಜೀನಾಮೆ ನೀಡಿದ ಶಾಸಕರು ಅಧಿವೇಶನಕ್ಕೆ ಭಾಗವಹಿಸಬೇಕೆ ಬೇಡವೇ ಎನ್ನುವುದು ರಾಜೀನಾಮೆ ನೀಡಿದ ಶಾಸಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರೀಂ ತೀರ್ಪು ನೀಡಿದೆ. ’
ಇದೇ ವೇಳೆ ರಾಜೀನಾಮೆಗೆ ಕಾರಣ ನೀಡುವಂತೆ ಶಾಸಕರನ್ನು ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂ ಹೇಳಿದ್ದು ಇದು ಅತೃಪ್ತರಿಗೆ ಪ್ಲಸ್ ಆಗಿ ಪರಿಣಮಿಸಲಿದೆ.
ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸ್ಪೀಕರ್ ರಮೇಶ್ ಕುಮಾರ್, ನನ್ನ ಕೆಲಸ ಅಂಪೈರ್ ನಂತೆ , ರಾಜೀನಾಮೆ ಅಂಗೀಕಾರ ಮಾಡುವಲ್ಲಿ ಬೇಕೆಂದು ನಾನು ವಿಳಂಬ ಧೋರಣೆ ಮಾಡುವುದಿಲ್ಲ. ಸಂವಿಧಾನದ ಚೌಕಟ್ಟು, ನಿಯಮಾವಳಿ ಪಾಲಿಸುತ್ತೇನೆ ಎಂದಿದ್ದಾರೆ.